ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಬಗೆಹರಿಯದೆ ಉಳಿದಿರುವ ಸಮಸ್ಯೆಗಳಿಗೆ ಪರಸ್ಪರ ಸ್ವೀಕಾರಾರ್ಹ ಪರಿಹಾರ ರೂಪಿಸಲು ಭಾರತ ಮತ್ತು ಚೀನಾ ಸೇನೆಗಳು ಒಪ್ಪಿಕೊಂಡಿವೆ. ಭಾನುವಾರ ನಡೆದ 16ನೇ ಸುತ್ತಿನ ಉನ್ನತ ಮಟ್ಟದ ಮಾತುಕತೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಬಾಕಿ ಉಳಿದಿರುವ ಸಮಸ್ಯೆಗಳ ಪರಿಹಾರದಿಂದ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆಗೆ ಸಹಾಯವಾಗಲಿದೆ. ಇದರಿಂದ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿ ಹೆಚ್ಚಾಗುತ್ತದೆ ಎಂದು ಉಭಯ ಪಕ್ಷಗಳು ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಪುನರುಚ್ಚರಿಸಲಾಗಿದೆ.
ಉಭಯ ಪಕ್ಷಗಳ ಮಧ್ಯೆ ಸುಮಾರು ಹನ್ನೆರಡೂವರೆ ಗಂಟೆಗಳ ಕಾಲ ಕಾಲ ನಡೆದ ಮಾತುಕತೆಗಳ ನಂತರ ಸೋಮವಾರ ರಾತ್ರಿ ಈ ಜಂಟಿ ಹೇಳಿಕೆ ನೀಡಲಾಗಿದೆ. "ಮಾರ್ಚ್ 11, 2022 ರಂದು ನಡೆದ ಹಿಂದಿನ ಸಭೆಯಲ್ಲಿ ಆಗಿದ್ದ ಪ್ರಗತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ, ಪಶ್ಚಿಮ ವಲಯದಲ್ಲಿ ಎಲ್‌ಎಸಿ ಸಂಬಂಧಿತ ಸಮಸ್ಯೆಗಳನ್ನು ರಚನಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಪರಿಹರಿಸಲು ಎರಡೂ ದೇಶಗಳ ಮಧ್ಯೆ ಚರ್ಚೆ ಮುಂದುವರೆದವು." ಎಂದು ಹೇಳಿಕೆ ತಿಳಿಸಿದೆ. ಸರ್ಕಾರವು ಪೂರ್ವ ಲಡಾಖ್ ಪ್ರದೇಶವನ್ನು ಪಶ್ಚಿಮ ವಲಯ ಎಂದು ಉಲ್ಲೇಖಿಸುತ್ತದೆ.
"ಬಾಕಿ ಉಳಿದಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ದೇಶಗಳ ನಾಯಕರು ಒದಗಿಸಿದ ಮಾರ್ಗದರ್ಶನಕ್ಕೆ ಅನುಗುಣವಾಗಿ, ಈ ವಿಷಯದಲ್ಲಿ ಸ್ಪಷ್ಟ ಮತ್ತು ಆಳವಾದ ಅಭಿಪ್ರಾಯಗಳನ್ನು ಚರ್ಚೆಯ ಸಂದರ್ಭದಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. ಉಳಿದ ಸಮಸ್ಯೆಗಳ ಪರಿಹಾರದಿಂದ ಪಶ್ಚಿಮ ವಲಯದ ಎಲ್‌ಎಸಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆಗೆ ಸಹಾಯವಾಗುತ್ತದೆ ಮತ್ತು ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿಯನ್ನು ಸಕ್ರಿಯಗೊಳಿಸುತ್ತದೆ ಎಂದು ಎರಡೂ ಕಡೆಯವರು ಪುನರುಚ್ಚರಿಸಿದ್ದಾರೆ" ಎಂದು ಹೇಳಿಕೆ ತಿಳಿಸಿದೆ. ಮಧ್ಯಂತರ ಸಮಯದಲ್ಲಿ ಈ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಎರಡೂ ಪಕ್ಷಗಳು ಒಪ್ಪಿಕೊಂಡಿದ್ದಾರೆ ಎಂದು ಎಂದು ಅದು ಹೇಳಿದೆ.
ಮಾತುಕತೆಯಲ್ಲಿ ಭಾರತೀಯ ನಿಯೋಗದ ನೇತೃತ್ವವನ್ನು ಲೇಹ್ ಮೂಲದ 14 ಕಾರ್ಪ್ಸ್‌ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೆಂಗುಪ್ತಾ ಮತ್ತು ಚೀನಾ ತಂಡದ ನೇತೃತ್ವವನ್ನು ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲಾ ಮುಖ್ಯಸ್ಥ ಮೇಜರ್ ಜನರಲ್ ಯಾಂಗ್ ಲಿನ್ ವಹಿಸಿದ್ದರು. ಮಾರ್ಚ್ 11 ರಂದು ನಡೆದ 15 ನೇ ಸುತ್ತಿನ ಮಿಲಿಟರಿ ಸಂವಾದವು ಯಾವುದೇ ಮಹತ್ವದ ಫಲಿತಾಂಶವನ್ನು ನೀಡದೆ ನಿಷ್ಫಲವಾಗಿತ್ತು.
ಭಾನುವಾರದ ಚರ್ಚೆಯಲ್ಲಿ, ಭಾರತೀಯ ನಿಯೋಗವು- ಮಿಲಿಟರಿ ಬಿಕ್ಕಟ್ಟು ಪ್ರಾರಂಭವಾಗುವ ಮೊದಲು ಇದ್ದಂತೆ ಏಪ್ರಿಲ್ 2020 ರ ಹಿಂದಿನ ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಒತ್ತಾಯಿಸಿತು ಎಂದು ಮೂಲಗಳು ತಿಳಿಸಿವೆ.