ಗ್ವಾಲಿಯರ್, ಮಧ್ಯಪ್ರದೇಶ : ಭಾರತದಲ್ಲಿ ನಶಿಸಿ ಹೋಗಿರುವ ಚೀತಾಗಳ ಸಂತತಿ ಮರುಸೃಷ್ಟಿಗೆ ಕೇಂದ್ರ ಸರ್ಕಾರ ಆಫ್ರಿಕಾ ರಾಷ್ಟ್ರಗಳಿಂದ ಚೀತಾಗಳನ್ನು ತಂದು ಮಧ್ಯಪ್ರದೇಶದ ಕುನೋ ಅಭಯಾರಣ್ಯದಲ್ಲಿ ಬಿಟ್ಟಿದ್ದು, ಒಂದರ ಹಿಂದೆ ಒಂದರಂತೆ ಮರಿ ಸೇರಿ 5 ಸಾವನ್ನಪ್ಪಿವೆ. ಇದಕ್ಕೆ ಟ್ರ್ಯಾಕಿಂಗ್ಗಾಗಿ ಅಳವಡಿಸಲಾಗಿರುವ ರೇಡಿಯೋ ಕಾಲರ್ ಕಾರಣ ಎಂದು ಹೇಳಲಾಗಿತ್ತು. ಆದರೆ, ಚೀತಾಗಳು ಸತ್ತಿದ್ದು, ಕೊಳೆತ ಆಹಾರದಿಂದ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಟ್ರ್ಯಾಕಿಂಗ್ ತಂಡ ವಾಹನದ ಮಾಜಿ ಚಾಲಕರೊಬ್ಬರು ಈ ಆರೋಪ ಮಾಡಿದ್ದು, ಚೀತಾಗಳ ಸರಣಿ ಸಾವಿಗೆ ಯಾವುದೇ ಕಾಯಿಲೆ, ಸೋಂಕು ಕಾರಣವಲ್ಲ. ಅವುಗಳಿಗೆ ನೀಡಿದ ಕೊಳೆತ ಮಾಂಸವನ್ನು ತಿನ್ನಿಸಲಾಗಿದ್ದು, ಹಸಿವಿನಿಂದ ಪ್ರಾಣ ಕಳೆದುಕೊಂಡಿವೆ ಎಂದು ದೂಷಿಸಿದ್ದಾರೆ.
ಚಿರತೆಗಳಿಗೆ ಮಾಂಸ ಸರಬರಾಜು ಮಾಡುವ ವಾಹನದ ಚಾಲಕನಾಗಿದ್ದ ನಾನು, ಈ ಅವ್ಯವಸ್ಥೆಯನ್ನು ಕಣ್ಣಾರೆ ಕಂಡಿದ್ದೇನೆ. ಕೊಳೆತ ಮಾಂಸವನ್ನು ಚೀತಾಗಳಿಗೆ ನೀಡುತ್ತಿದ್ದುದನ್ನು ಹತ್ತಿರದಿಂದ ನೋಡಿದ್ದೇನೆ. ಚಿರತೆಗಳಿಗೆ ಮಾಂಸಾಹಾರ ನೀಡುವ ಹೆಸರಿನಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಯುತ್ತಿದೆ ಎಂದು ಆತ ದೂರಿದ್ದಾನೆ.
ಕೊಳತೆ ಮಾಂಸವೇ ಆಹಾರ: ಇಷ್ಟೇ ಅಲ್ಲ, 2 ಎಮ್ಮೆಯ ಒಂದೂವರೆ ಕ್ವಿಂಟಲ್ ಮಾಂಸವನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದರಿಂದ, ಮಾಂಸ ಬಿಗಿದುಕೊಂಡಿತ್ತು. ಅದನ್ನು ಬಳಿಕ ಚಿರತೆಗಳು ತಂದು ಹಾಕಲಾಯಿತು. ಆ ಮಾಂಸವನ್ನು ಚೀತಾಗಳು ತಿನ್ನಲು ಸಾಧ್ಯವಾಗಿಲ್ಲ. ಫ್ರಿಡ್ಜ್‌ನಲ್ಲಿ ಹಲವು ದಿನ ಇಟ್ಟಿದ್ದರಿಂದ ಕೊಳೆಯುವ ಸ್ಥಿತಿಗೆ ಬಂದಿತ್ತು. ಯಾವುದೇ ಬೇಟೆಯೂ ಸಿಗದೇ ಅವುಗಳು ಹಸಿವಿನಿಂದ ಸಾಯುತ್ತಿವೆ ಎಂದು ದೂರಿದ್ದಾರೆ.
ಅಧಿಕಾರಿಗಳು ಹೇಳುವ ಸೋಂಕು, ಅನಾರೋಗ್ಯ ಸಾವಿಗೆ ಕಾರಣವಲ್ಲ. ಕಾಡಿನಲ್ಲಿ ಅವುಗಳಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ದೊರೆಯುತ್ತಿಲ್ಲ. ತಪ್ಪನ್ನು ಮರೆಮಾಚಲು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ಚೀತಾಗಳಿಗೆ ಯಾವುದೇ ರೋಗವಿಲ್ಲ, ಅವೆಲ್ಲವೂ ಸಂಪೂರ್ಣವಾಗಿ ಆರೋಗ್ಯವಾಗಿವೆ. ಕೊರತೆ ಎಂಬುದಿದ್ದರೆ ಅದು ಆಹಾರದ ಅವ್ಯವಸ್ಥೆ. ಇದರಲ್ಲಿ ಕುನೊ ರಾಷ್ಟ್ರೀಯ ಉದ್ಯಾನವನದ ಡಿಎಫ್‌ಒ, ಸಿಸಿಎಫ್‌ಗಳೂ ಭಾಗಿದಾರರೂ ಎಂದು ಆರೋಪಿಸಿದ್ದಾರೆ.
ಆರೋಪಗಳ ಬಗ್ಗೆ ತನಿಖೆ : ಚೀತಾಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪ ಹೊರಿಸಿರುವ ಟ್ರ್ಯಾಕಿಂಗ್ ವಾಹನದ ಚಾಲಕನನ್ನು 3 ತಿಂಗಳ ಹಿಂದೆ ಕೆಲಸದಿಂದ ತೆಗೆದು ಹಾಕಲಾಗಿದೆ. ಅವರ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ಡಿಎಫ್‌ಒ ಪ್ರಕಾಶ್ ವರ್ಮಾ ಹೇಳಿದರು.
ಇದನ್ನೂ ಓದಿ: Cheetah death: ಕುನೋ ಅರಣ್ಯದಲ್ಲಿ ಚೀತಾಗಳ ಸಾವಿನ ಕಾರಣ, ಪರಿಹಾರಕ್ಕಾಗಿ ವಿದೇಶಿ ತಜ್ಞರ ಮೊರೆ