ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ಕೆಎಸ್'ಆರ್'ಟಿಸಿ KSRTC ಎನ್ನುವ ಹೆಸರನ್ನು ಕಳೆದುಕೊಳ್ಳಲಿದೆ. ಕೆಎಸ್'ಆರ್'ಟಿಸಿ ಎಂಬ ಹೆಸರು ಕೇರಳ ಪಾಲಾಗಿದೆ. ಭಾರತ ಸರ್ಕಾರದ ಟ್ರೇಡ್ಮಾರ್ಕ್ ರಿಜಿಸ್ಟ್ರಿ ಇಂತಹದೊಂದು ಆದೇಶ ಹೊರಡಿಸಿದೆ.
ಕೆಎಸ್ಆರ್ಟಿಸಿ ಹೆಸರು ಮತ್ತು ಎರಡು ಆನೆಯ ಸಂಕೇತ, ಆನವಂಡಿ ಹೆಸರಿನ ಕಾಪಿರೈಟ್ ಅನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಂಜೂರು ಮಾಡಿದೆ. ಟ್ರೇಡ್ಮಾರ್ಕ್ ರಿಜಿಸ್ಟ್ರಿ ಮಂಜೂರು ಮಾಡಿರುವುದಾಗಿ ಕೇರಳ ಸರ್ಕಾರದ ಸಾರಿಗೆ ಇಲಾಖೆ ಬುಧವಾರ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕೇರಳ ಮತ್ತು ಕರ್ನಾಟಕ ರಾಜ್ಯಗಳ ನಡುವೆ 'ಕೆಎಸ್‌ಆರ್‌ಟಿಸಿ' ಮೊನೊಗ್ರಾಮ್ (ಸಾಂಕೇತಿಕಾಕ್ಷರಗಳು) ಕುರಿತ ವಿವಾದ ಬಹಳ ಹಿಂದೆಯೇ ಹುಟ್ಟಿಕೊಂಡಿತ್ತು. ಆದರೆ, ಎರಡು ರಾಜ್ಯಗಳ ನಡುವಿನ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಂಬಂಧಿಸಿದಂತೆ 'ಕೆಎಸ್‌ಆರ್‌ಟಿಸಿ' ಮೊನೊಗ್ರಾಮ್ ಬಳಸುವ ಬಗೆಗಿನ ಕಾನೂನು ವಿವಾದವೂ 2014ರಲ್ಲಿ ಎಲ್ಲರ ಗಮನಕ್ಕೆ ಬಂದಿತ್ತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯು ಕೇರಳ ಸಾರಿಗೆ ಇಲಾಖೆಗೆ ಪತ್ರ ಬರೆದು ಕೆಎಸ್ಆರ್ಟಿಸಿ ಮೊನೊಗ್ರಾಮ್ ಬಳಸದಂತೆ ಸೂಚಿಸಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇರಳ ಸಾರಿಗೆ ಇಲಾಖೆ, 1953 ರಿಂದಲೂ 'ಕೆಎಸ್‌ಆರ್‌ಟಿಸಿ' ಮೊನೊಗ್ರಾಮ್‌ನೊಂದಿಗೆ ಬಳಸುತ್ತಿದ್ದೇವೆ ಎಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಲ್ಲಿ ಆಕ್ಷೇಪಣೆ ಸಲ್ಲಿಸಿತ್ತು.
ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ (ಟಿಎಸ್‌ಟಿಡಿ) ರಚನೆಯಾದಾಗ ಬ್ರಿಟಿಷ್ ರಾಜನ ಅವಧಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು 1965 ರಲ್ಲಿ ರಚಿಸಲಾಯಿತು. ಕರ್ನಾಟಕವು ಕೆಎಸ್‌ಆರ್‌ಟಿಸಿ ಹೆಸರನ್ನು 1973 ರಿಂದ ಬಳಸಲಾರಂಭಿಸಿತು.
ಕರ್ನಾಟಕ ರಾಜ್ಯ ಸಾರಿಗೆಗೆ ಈ ಹೆಸರು ಬಳಸದಂತೆ ಕೇರಳ ನೋಟಿಸ್
ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಟ್ರೇಡ್ ರಿಜಿಸ್ಟ್ರಿ ಕೇರಳದ ಪರ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಸಾರಿಗೆ ಇಲಾಖೆ, ರಾಜ್ಯ ಸಾರಿಗೆ ಇಲಾಖೆಗೆ ಇನ್ಮುಂದೆ ಕೆಎಸ್ಆರ್ಟಿಸಿ ಎಂದು ಬಳಸಬೇಡಿ ಎಂದು ನೋಟಿಸ್ ಜಾರಿಗೊಳಿಸಲು ನಿರ್ಧರಿಸಿದೆ.