ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧ್ಯಕ್ಷರ ನೇಮಕ ವಿವಾದ ಕುರಿತಂತೆ ಹೈಕೋರ್ಟ್ ಜೂ.8ರಂದು ಅಂತಿಮ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಮಾನದಂಡಗಳನ್ನು ನಿರ್ಲಕ್ಷಿಸಿ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಲಾಗುತ್ತಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ಆರ್. ಆಂಜನೇಯ ರೆಡ್ಡಿ ಹಾಗೂ ಇತರರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ವಾದಿಸಿ, ಕೆಎಸ್ ಪಿಸಿಬಿ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿದ್ದ ಸಾರ್ವಜನಿಕ ನೋಟಿಸ್ ಅನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಅಧ್ಯಕ್ಷರ ನೇಮಕ ಸಂಬಂಧ ರಾಜ್ಯ ಸರ್ಕಾರ ರೂಪಿಸಿರುವ ನಿಯಮಗಳು ಸುಪ್ರೀಂಕೋರ್ಟ್, ಹೈಕೋರ್ಟ್ ಮಾರ್ಗಸೂಚಿಗಳಿಗೆ ವಿರುದ್ಧವಾಗಿವೆ. ಸರ್ಕಾರ ಸರಿಯಾದ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಿಲ್ಲ ಎಂದು ಆರೋಪಿಸಿದರು.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ನ್ಯಾಯಾಲಯದ ಅನುಮತಿಯಂತೆ ಅಧ್ಯಕ್ಷರ ನೇಮಕಕ್ಕೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. 102 ಅರ್ಜಿಗಳನ್ನು ಸ್ವೀಕರಿಸಿ, ಅವುಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ನೇತೃತ್ವದ ಉನ್ನತ ಸಮಿತಿ ಓರ್ವ ಅರ್ಹ ಅಭ್ಯರ್ಥಿಯನ್ನು ಆಯ್ಕೆಗೆ ಅಂತಿಮಗೊಳಿಸಿದೆ. ಆದರೆ, ಹೈಕೋರ್ಟ್ನಲ್ಲಿ ಅರ್ಜಿ ಬಾಕಿ ಇರುವ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿದೆ. ನ್ಯಾಯಾಲಯ ಅರ್ಜಿಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಿದರೆ ಅನುಕೂಲವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಜೂನ್ 8ರಂದು ಈ ಸಂಬಂಧ ಸಲ್ಲಿಕೆಯಾಗಿರುವ ನಾಲ್ಕು ಅರ್ಜಿಗಳ ಅಂತಿಮ ವಿಚಾರಣೆ ನಡೆಸಿ ತೀರ್ಪು ನೀಡಲಾಗುವುದು ಎಂದು ತಿಳಿಸಿ, ವಿಚಾರಣೆ ಮುಂದೂಡಿತು.