ಕೊಲ್ಲಂ(ಕೇರಳ): ಪಾಲಕ್ಕಾಡ್ನ 10 ನೇ ತರಗತಿ ವಿದ್ಯಾರ್ಥಿಯೋರ್ವ ನಟ, ಶಾಸಕ ಎಂ.ಮುಖೇಶ್ ಅವರಿಗೆ ಸತತವಾಗಿ ಕರೆ ಮಾಡಿ ಸಹಾಯ ನೀಡುವಂತೆ ದೂರವಾಣಿ ಮೂಲಕ ಒತ್ತಾಯಿಸುತ್ತಿದ್ದ. ಆದರೆ ಅಲ್ಲಿನ ಶಾಸಕರನ್ನು ಕರೆಯದೆ ತನ್ನನ್ನು ಒತ್ತಾಯಿಸುತ್ತಿದ್ದ ಎಂದು ಆಕ್ರೋಶಗೊಂಡ ಶಾಸಕ ಮುಖೇಶ್ ಫೋನ್ ಮೂಲಕ ಕಿರುಚಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಾಸಕ ಮುಖೇಶ್, "ವಿದ್ಯಾರ್ಥಿ ಮೂಲಕ ನನಗೆ ಕರೆ ಮಾಡಿಸಿ, ನನ್ನನ್ನು ಮೂಲೆಗುಂಪು ಮಾಡುವ ರಾಜಕೀಯ ಪ್ರೇರಿತ ಯೋಜನೆಯಿದು. ಕೊಲ್ಲಂನಿಂದ ಪುನರಾಯ್ಕೆಯಾದಾಗಿನಿಂದಲೂ ಇದೇ ರೀತಿ ಕರೆಗಳು ಬರುತ್ತಿವೆ. ರೈಲು ಏಕೆ ತಡವಾಗಿದೆ. ಯಾವಾಗ ವಿದ್ಯುತ್ ಸರಬರಾಜು ಪುನಃಸ್ಥಾಪನೆಯಾಗುತ್ತದೆ ಎಂದು ಕ್ಷುಲ್ಲಕ ವಿಷಯಗಳ ಕುರಿತು ಪ್ರತೀ ದಿನ ಕರೆ ಬರುತ್ತಿವೆ" ಎಂದು ಹೇಳಿದ್ದಾರೆ.
ಈ ಆಡಿಯೋ ಕ್ಲಿಪ್ ವೈರಲ್ ಆಗಿದ್ದು ಅದರಲ್ಲಿ ಮುಖೇಶ್, ಬಾಲಕನ ಕುಂದುಕೊರತೆಗಳನ್ನು ಕೇಳುವ ಬದಲು ಆಕ್ರೋಶಗೊಂಡಿರುವುದು ಕೇಳುತ್ತದೆ. ನನ್ನ ಬಳಿ ಸಹಾಯ ಕೇಳುವ ಮೊದಲು ನಿಮ್ಮ ಕ್ಷೇತ್ರ ಪಾಲಕ್ಕಾಡ್ನ ಶಾಸಕರ ಬಳಿ ಕೇಳಿ. ನನ್ನ ಮೊಬೈಲ್ ಸಂಖ್ಯೆ ನೀಡಿದವನಿಗೆ ಕಪಾಳಮೋಕ್ಷ ಮಾಡಬೇಕೆಂದು ವಿದ್ಯಾರ್ಥಿಗೆ ತಿಳಿಸಿರುವುದು ಆಡಿಯೋದಲ್ಲಿದೆ.
ಈ ವೇಳೆ ವಿದ್ಯಾರ್ಥಿ ಮಾತನಾಡಿದ್ದು, ನನಗೆ ಪಾಲಕ್ಕಾಡ್ ಶಾಸಕ ಯಾರೆಂದು ತಿಳಿದಿಲ್ಲ ಎಂದಿದ್ದಾನೆ. ಆಗ ಇನ್ನಷ್ಟು ಆಕ್ರೋಶಗೊಂಡ ಮುಖೇಶ್, ಅದನ್ನು ಮೊದಲು ತಿಳಿದುಕೊ. ನಿನ್ನ ಕ್ಷೇತ್ರದ ಶಾಸಕರನ್ನು ಮೊದಲು ಸಂಪರ್ಕಿಸದೆ ನನಗೆ ಕರೆ ಮಾಡಬೇಡ ಎಂದಿದ್ದಾರೆ.
ಈ ಬಗ್ಗೆ ವಿವರಿಸಿದ ಮುಖೇಶ್, ರೆಕಾರ್ಡ್ ಮಾಡಿದ ಸಂಭಾಷಣೆಗೆ ಮುಂಚಿತವಾಗಿ ವಿದ್ಯಾರ್ಥಿಯು ಆರು ಬಾರಿ ಕರೆ ಮಾಡಿದ್ದಾನೆ. ಪ್ರತಿ ಬಾರಿಯೂ ತಾನು ಸಭೆಯಲ್ಲಿರುತ್ತೇನೆ. ಆ ಸಂದರ್ಭದಲ್ಲಿ ಈ ರೀತಿ ಬಾಲಕ ತೊಂದರೆ ಕೊಡುತ್ತಾನೆ ಎಂದು ತಿಳಿಸಿದ್ದಾರೆ.