ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸಂಸತ್ತಿನಲ್ಲಿ ಬುಧವಾರ ನಡೆದ ಭದ್ರತಾ ಲೋಪ ಪ್ರಕರಣದ ನಂಟು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾಕ್ಕೂ ಹಬ್ಬಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆಯ ಮಾಸ್ಟರ್ ಮೈಂಡ್ ಎಂದೇ ಎನ್ನಲಾದ ಲಲಿತ್ ಝಾ ಎಂಬಾತ ದೆಹಲಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಬುಧವಾರ ಲೋಕಸಭೆ ಕಲಾಪಕ್ಕೆ ನುಗ್ಗಿದ ಇಬ್ಬರು ಹಾಗೂ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಇಬ್ಬರನ್ನು ಈಗಾಗಲೇ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಭಾರಿ ಭದ್ರತೆಯನ್ನೂ ಭೇದಿಸಿದ ಈ ಘಟನೆಯ ಮಾಸ್ಟರ್ ಮೈಂಡ್ ಲಲಿತ್ ಝಾ ಎಂದೇ ಹೇಳಲಾಗಿದೆ. ಮೂಲಗಳ ಪ್ರಕಾರ, ಕೋಲ್ಕತ್ತಾದ ಬುರ್ರಾಬಜಾರ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಲಲಿತ್ ಝಾ ವಾಸಿಸುತ್ತಿದ್ದ. ಇದರ ಮಾಹಿತಿ ತಿಳಿದು ಬುರ್ರಾಬಜಾರ್ ಠಾಣೆಯ ಪೊಲೀಸರು ಹಾಗೂ ಗುಪ್ತಚರ ಇಲಾಖೆಯ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ನೀಡಿ, ಮನೆಯ ಮಾಲೀಕರಿಂದ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ಲಲಿತ್ ಝಾ, ಆನ್‌ಲೈನ್ ಮೂಲಕ ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸುತ್ತಿದ್ದರು ಎಂದು ಮನೆಯ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಪರಿಣಾಮವಾಗಿ, ಹೆಚ್ಚಾಗಿ ಭೇಟಿಯಾಗುತ್ತಿರಲಿಲ್ಲ. ಮೇಲಾಗಿ ಹಲವಾರು ವರ್ಷಗಳಿಂದ ಅಲ್ಲಿಯೇ ಇದ್ದರೂ ಆ ಪ್ರದೇಶದ ಜನರೊಂದಿಗೆ ಅಂತಹ ಸಂಪರ್ಕವನ್ನೂ ಆತ ಹೊಂದಿರಲಿಲ್ಲ ಎಂಬುವುದಾಗಿ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.
ದೆಹಲಿ ಪೊಲೀಸರ ಅಪರಾಧ ವಿಭಾಗದ ಮಾಹಿತಿ ಪ್ರಕಾರ, ಲಲಿತ್ ಝಾ ಕೋಲ್ಕತ್ತಾಗೆ ಬಂದು ರಹಸ್ಯವಾಗಿ ತಲುಪಿದ್ದ ಎಂಬ ಶಂಕೆ ವ್ಯಕ್ತವಾಗಿತ್ತು. ಇದಲ್ಲದೇ, ಈತ ಬಂಗಾಳದ ಪುರುಲಿಯಾ ಜಿಲ್ಲೆಯ ಎನ್ಜಿಒವೊಂದರಲ್ಲಿ ಕೆಲಸ ಮಾಡುತ್ತಿದ್ದ. ಪುರುಲಿಯಾ ಯುವಕನೊಬ್ಬ ಸಂಸತ್ತಿನಲ್ಲಿ ಬುಧವಾರದ ಘಟನೆಯ ಕೆಲವು ವಿಡಿಯೋಗಳನ್ನು ಲಲಿತ್‌ನಿಂದ ಸ್ವೀಕರಿಸಿದ್ದಾನೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಸ್ವತಃ ಲಲಿತ್ ಝಾ ಪೊಲೀಸರಿಗೆ ಶರಣಾಗಿದ್ದಾನೆ.
ಮತ್ತೊಂದೆಡೆ, ಕಲಾಪಕ್ಕೆ ನುಗ್ಗಿದ ಇಬ್ಬರ ಆರೋಪಿಗಳಾದ ಕರ್ನಾಟಕದ ಮನೋರಂಜನ್.ಡಿ, ಉತ್ತರ ಪ್ರದೇಶದ ಸಾಗರ್ ಶರ್ಮಾ ಹಾಗೂ ಇದೇ ಸಮಯದಲ್ಲಿ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ ಮಹಾರಾಷ್ಟ್ರದ ಅಮೋಲ್ ಶಿಂಧೆ ಮತ್ತು ಹರಿಯಾಣದ ನೀಲಂ ದೇವಿಯನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಜೊತೆಗೆ ಭಯೋತ್ಪಾದನಾ ವಿರೋಧಿ ಕಾನೂನು ಆಗಿರುವ ಯುಎಪಿಎ ಅಡಿ ಆರೋಪ ಹೊರಿಸಲಾಗಿದೆ.
ಇದನ್ನೂ ಓದಿ: ಸಂಸತ್ ಭವನದ ಭದ್ರತಾ ಲೋಪ ಪ್ರಕರಣ: 7 ದಿನ ಪೊಲೀಸ್ ಕಸ್ಟಡಿಗೆ ನಾಲ್ವರು ಆರೋಪಿಗಳು