ಶಿವಸಾಗರ್ (ಅಸ್ಸೋಂ): ತಾವು ಅಪಹರಿಸಿದ್ದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಸಿಬ್ಬಂದಿ ರಿತುಲ್ ಸೈಕಿಯಾರನ್ನು ಕೊನೆಗೂ ಉಲ್ಫಾ ಉಗ್ರರು ಬಿಡುಗಡೆ ಮಾಡಿದ್ದಾರೆ.
ಏಪ್ರಿಲ್ 21ರಂದು ಶಿವಸಾಗರ ಜಿಲ್ಲೆಯ ಪ್ರದೇಶದಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸೋಂ-ಇಂಡಿಪೆಂಡೆಂಟ್ (ULFA-I) ಎಂಬ ನಿಷೇಧಿತ ಸಂಘಟನೆಯ ಉಗ್ರರು ಒಎನ್‌ಜಿಸಿಯ ಇಬ್ಬರು ಸಹಾಯಕ ಜೂನಿಯರ್ ಎಂಜಿನಿಯರ್ಗಳಾದ ಮೋಹನ್ ಗೊಗೊಯ್ (35), ಅಲಕೇಶ್ ಸೈಕಿಯಾ (28) ಹಾಗೂ ಜೂನಿಯರ್ ಟೆಕ್ನಿಶಿಯನ್ ರಿತುಲ್ ಸೈಕಿಯಾ (33) ಅವರನ್ನು ಅಪಹರಿಸಿದ್ದರು.

ಜಂಟಿ ಕಾರ್ಯಾಚರಣೆ ಕೈಗೊಂಡಿದ್ದ ಭಾರತೀಯ ಸೇನೆ ಹಾಗೂ ಅಸ್ಸೋಂ ರೈಫಲ್ಸ್ ಮೂರು ದಿನಗಳಲ್ಲೇ ಮೋಹನ್ ಗೊಗೊಯ್ ಹಾಗೂ ಅಲಕೇಶ್ ಸೈಕಿಯಾರನ್ನು ರಕ್ಷಿಸಿದ್ದರು. ಮತ್ತೋರ್ವನಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದರು. ಇತ್ತೀಚೆಗಷ್ಟೇ ಅಸ್ಸೋಂ ಮುಖ್ಯಮಂತ್ರಿ ಹಿಮಂತ್ ಬಿಶ್ವಾ ಶರ್ಮಾ ಸುದ್ದಿಗೋಷ್ಠಿಯಲ್ಲಿ ಅಲಕೇಶ್ ಸೈಕಿಯಾರನ್ನು ಬಿಡುಗಡೆ ಮಾಡುವಂತೆ ಉಲ್ಫಾ ಸಂಘಟನೆಯ ಮುಖ್ಯ ಕಮಾಂಡರ್ಗೆ ಆಗ್ರಹಿಸಿದ್ದರು. ಇದೀಗ ಉಗ್ರರು ರಿತುಲ್ ಸೈಕಿಯಾರನ್ನು ಬಿಡುಗಡೆ ಮಾಡಿದ್ದಾರೆ.