ಬೆಂಗಳೂರು: ಹಿಂದಿ ಭಾಷೆ ವಿಚಾರಕ್ಕಾಗಿ ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟ ಕಿಚ್ಚ ಸುದೀಪ್ ಮಧ್ಯೆ ಟ್ವೀಟ್ ವಾರ್ ನಡೆದಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು 'ಎಲ್ಲ ಭಾಷೆಗಳು ದೇಶದ ಆತ್ಮಗಳಿದ್ದಂತೆ' ಎಂದು ಹೇಳಿರುವುದನ್ನು ಉಲ್ಲೇಖಿಸಿರುವ ಕಿಚ್ಚ ಸುದೀಪ್ ಪ್ರಾಂತೀಯ ಭಾಷೆಗಳ ಬಗ್ಗೆ ಪ್ರಧಾನಿ ಮಾತನಾಡಿರುವುದು ಸ್ವಾಗತಾರ್ಹ. ಅವರ ಈ ಹೇಳಿಕೆ ಪ್ರತಿಯೊಬ್ಬರ ಮಾತೃಭಾಷೆಯನ್ನು ಗೌರವಿಸುವ ಪ್ರತೀಕ ಎಂದು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಮಾತೃಭಾಷೆಗಳ ಬಗ್ಗೆ ನೀಡಿರುವ ಹೇಳಿಕೆ ಅಗಾದವಾದುದು. ನಾನು ಯಾವುದೇ ಗಲಭೆ ಅಥವಾ ಚರ್ಚೆಯನ್ನು ಪ್ರಾರಂಭಿಸಲು ಉದ್ದೇಶಿಸಿಲ್ಲ. ಯಾವುದೇ ಅಜೆಂಡಾ ಇಲ್ಲದೇ ವ್ಯಕ್ತಪಡಿಸಿದ ಅಭಿಪ್ರಾಯವಾಗಿದೆ. ಪ್ರಧಾನಿ ಅವರ ಬಾಯಿಂದ ಬಂದ ಪ್ರಾಂತೀಯ ಭಾಷೆಗಳ ಬಗೆಗಿನ ಆ ಮಾತುಗಳು ಗೌರವ ಮತ್ತು ನಮ್ಮ ಸೌಭಾಗ್ಯವಾಗಿದೆ ಎಂದು ಹೇಳಿದ್ದಾರೆ.
ಅಗಾಧ ಶಕ್ತಿ ಬಂದಿದೆ: ತಮ್ಮ ಮಾತೃ ಭಾಷೆಯನ್ನು ಗೌರವ ಮತ್ತು ಆತ್ಮಾಭಿಮಾನದಿಂದ ಕಾಣುವ ಮೋದಿ ಅವರು ಆಡಿದ ಮಾತುಗಳು ಉತ್ತೇಜನ ಮತ್ತು ಅಗಾಧವಾದ ಶಕ್ತಿಯನ್ನು ತುಂಬಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ನಾನು ಕನ್ನಡವನ್ನು ಪ್ರತಿನಿಧಿಸಿದ ಮಾತ್ರಕ್ಕೆ ಈ ಮಾತನ್ನು ಹೇಳುತ್ತಿಲ್ಲ. ಇದು ಎಲ್ಲ ಭಾಷೆಗಳಿಗೂ ಅನ್ವಯ. ನಾವು ನರೇಂದ್ರ ಮೋದಿ ಅವರನ್ನು ಕೇವಲ ರಾಜಕಾರಣಿಯಾಗಿ ನೋಡುವುದಿಲ್ಲ. ಅವರನ್ನು ನಾಯಕರಾಗಿಯೂ ಕಾಣುತ್ತೇವೆ ಎಂದು ಸುದೀಪ್ ಹೇಳಿದ್ದಾರೆ.
ಅಷ್ಟೇ ಅಲ್ಲಾ ಭಾಷೆ ವಿಚಾರದಲ್ಲಿ ಭಾಷೆ ಹೇರಿಕೆ ಇರಬಾರದು. ನಾವು ಇತರ ಭಾಷೆಗಳನ್ನು ಕಲಿಯುತ್ತಿದ್ದೇವೆ, ಜೊತೆಗೆ ಬೇರೆಯವರು ಕೂಡ ತಮ್ಮ ಭಾಷೆ ಅಲ್ಲದೇ ಬೇರೆ ಭಾಷೆಗಳನ್ನ ಕಲಿತುಕೊಂಡರೆ ಅವರಿಗೆ ಒಳ್ಳೆಯದು. ಯಾಕೆಂದರೆ ನಾವೆಲ್ಲರೂ ನಾವಿರುವ ರೀತಿಯಲ್ಲಿ ಸಹಬಾಳ್ವೆ ನಡೆಸಬೇಕು ಅಂತಾ ಕಿಚ್ಚ ಸುದೀಪ್ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.
ಇದನ್ನು ಓದಿ:ಬಿಜೆಪಿ ಟಿಕೆಟ್ ಕೊಟ್ರೆ ಮತ್ತೆ ಚುನಾವಣೆಗೆ ನಿಲ್ಲುತ್ತೇನೆ: ನಟ ಸಾಯಿ ಕುಮಾರ್
ಮೋದಿ ಹೇಳಿದ್ದೇನು? ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ, ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ಮಾತನ್ನ ಪರೋಕ್ಷವಾಗಿ ಹೇಳಿದ್ದಾರೆ. ನಿನ್ನೆ ಜೈಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಾತನಾಡಿರುವ ನರೇಂದ್ರ ಮೋದಿ, ಕಳೆದ ಕೆಲವು ದಿನಗಳಿಂದ ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಗಳು ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ.
ಬಿಜೆಪಿಯು ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲೂ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಕಾಣುತ್ತದೆ. ಅವುಗಳನ್ನು ಪೂಜನೀಯವಾಗಿ ಪರಿಗಣಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಯೊಂದು ಪ್ರಾದೇಶಿಕ ಭಾಷೆಗೂ ಆಯಾ ಸಂಸ್ಕೃತಿಯ ಮೇಲೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಮೊದಲು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಿಚ್ಚ ಸುದೀಪ್ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿಗೆ ನಿಮ್ಮ ಸಿನಿಮಾಗಳನ್ನು ಏಕೆ ಡಬ್ ಮಾಡ್ತೀರಾ ಎಂದು ಪ್ರಶ್ನಿಸಿದ್ದರು. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಿಂದಿ ಹೇರಿಕೆ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿತ್ತು.