ನವದೆಹಲಿ: ಪಕ್ಷದ ಎಲ್ಲ ಹುದ್ದೆಗಳಿಗೆ ಹೊಣೆಗಾರಿಕೆ ಮತ್ತು ಕಾರ್ಯಕ್ಷಮತೆಯ ಪರಾಮರ್ಶೆ ಅತ್ಯಗತ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ. ಈ ಮೂಲಕ ಅವರು ಸಾಂಸ್ಥಿಕ ಸುಧಾರಣೆಗಳಿಗೆ ಧ್ವನಿಗೂಡಿಸಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಇತಿಹಾಸವನ್ನು ಸೃಷ್ಟಿಸುತ್ತಿದೆ ಎಂದು ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷರು ಕೇಂದ್ರ ಸರ್ಕಾರ ಯಾತ್ರೆ ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚಿನ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಶ್ರಮಿಸಿದ ನಾಯಕರನ್ನು ಅವರು ಗುಣಗಾನ ಮಾಡಿದರು. ಅದರಲ್ಲೂ ವಿಶೇಷವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಅಭಿನಂದಿಸಿದ ಖರ್ಗೆ, ಚುನಾವಣಾ ಗೆಲುವು ಹಳೆಯ ಪಕ್ಷಕ್ಕೆ ಪಾಠವಾಗಿದೆ ಎಂದು ಹೇಳಿದರು. ನಾವು ಒಟ್ಟಾಗಿ ಸವಾಲುಗಳನ್ನು ಎದುರಿಸಬೇಕಾಗಿದೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬುದನ್ನು ನಾವು ಈ ಚುನಾವಣೆ ಮೂಲಕ ಕಂಡುಕೊಂಡಿದ್ದೇವೆ ಎಂದು ಕಾಂಗ್ರೆಸ್ ಅಧ್ಯಕ್ಷರು ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ನಾನು ಎಲ್ಲಾ ಹಂತಗಳಲ್ಲಿ ಹೊಣೆಗಾರಿಕೆಯ ಅವಶ್ಯಕತೆ ಬಗ್ಗೆ ಮಾತನಾಡಿದ್ದೆ. ನಾನು ಈಗ ಅದಕ್ಕೆ ಕಾರ್ಯಕ್ಷಮತೆಯ ಮಾಪನವನ್ನು ಮಾಡಲು ಬಯಸುತ್ತೇನೆ ಎಂದು ಖರ್ಗೆ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಪಿಸಿಸಿ ಮುಖ್ಯಸ್ಥರು ಮತ್ತು ಸಿಎಲ್‌ಪಿ ನಾಯಕರ ಸಭೆಯಲ್ಲಿ ಹೇಳಿದ್ದಾರೆ. ಅಕ್ಟೋಬರ್ 26 ರಂದು ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಮೊದಲ ಬಾರಿಗೆ ಪಿಸಿಸಿ ಹಾಗೂ ಸಿಎಲ್‌ಪಿ ನಾಯಕರ ಸಭೆ ಉದ್ದೇಶಿಸಿ ಮಾತನಾಡಿದರು.
ಎಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು: ಮೇಲಿನಿಂದ ಕೆಳಗಿನ ಎಲ್ಲ ನಾಯಕರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇದಲ್ಲದೇ, ಸಂಘಟನೆಯ ನೇಮಕಗಳು ಪಕ್ಷಕ್ಕೆ ಪ್ರಯೋಜನವಾಗದ ಆಚರಣೆಯಾಗಬಾರದು. ಕೊಟ್ಟ ಜವಾಬ್ದಾರಿ ಸರಿಯಾಗಿ ನಿರ್ವಹಣೆ ಆಗುತ್ತಿದೆಯಾ ಎಂಬ ಬಗ್ಗೆ ಪ್ರತಿ ಆರು ತಿಂಗಳಿಗೊಮ್ಮೆ ಪರಾಮರ್ಶೆಗೆ ಒಳಗಾಗಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಪ್ರತಿಪಾದಿಸಿದರು.
ಭಾರತ್ ಜೋಡೋ ಯಾತ್ರೆ ಶ್ಲಾಘಿಸಿದ ಖರ್ಗೆ: ಸಭೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಶ್ಲಾಘಿಸಿದ ಖರ್ಗೆ, ಇದು ಐತಿಹಾಸಿಕ ಎಂದು ಹೇಳಿದರು. 2023 ರ ಜನವರಿಯಲ್ಲಿ ಪಾದಯಾತ್ರೆ ಮುಗಿದ ನಂತರ ದೇಶದಾದ್ಯಂತ ಎಲ್ಲ ಮನೆ ಮನೆಗಳಿಗೂ ಯಾತ್ರೆಯ ಸಂದೇಶವನ್ನು ತಲುಪಿಸಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕು ಎಂದು ಖರ್ಗೆ ಕರೆ ನೀಡಿದರು.
ಯಾತ್ರೆಯ ಭಾವನೆಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹೊಸ ಅಭಿಯಾನ ಮಾಡಲಿದೆ. ಈ ವರ್ಷ ಪಕ್ಷಕ್ಕೆ ಸೇರ್ಪಡೆಯಾದ 2.6 ಕೋಟಿ ಹೊಸ ಡಿಜಿಟಲ್ ಸದಸ್ಯರನ್ನು ಹೊಸ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಪದಾಧಿಕಾರಿಗಳನ್ನು ಬಳಸಿಕೊಳ್ಳುವಂತೆಯೂ ಅವರು ಇದೇ ವೇಳೆ ಎಲ್ಲ ರಾಜ್ಯಗಳ ಅಧ್ಯಕ್ಷರು, ಸಿಎಲ್‌ಪಿ ನಾಯಕರಿಗೆ ಮನವಿ ಪೂರ್ವಕ ಸೂಚನೆ ನೀಡಿದರು.
ಇದನ್ನು ಓದಿ: ಹರಿಯಾಣದ ಖೇರ್ಲಿ ಲಾಲಾದಿಂದ ಪುನಾರಂಭಗೊಂಡ ಭಾರತ್ ಜೋಡೋ ಯಾತ್ರೆ.. ರಾಹುಲ್ ಜತೆ ಗಣ್ಯರು!