ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ನಲ್ಲಿ "ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮ"ದ ಅನುಸಾರ ಅವರು ವಿಪಕ್ಷ ನಾಯಕ ಹುದ್ದೆಗೆ ರಾಜೀನಾಮೆ ನೀಡಿದ್ದು, ಪತ್ರವನ್ನು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ನಾನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಈ ಮೂಲಕ ರಾಜೀನಾಮೆ ನೀಡುತ್ತೇನೆ ಎಂದು ಖರ್ಗೆ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಖರ್ಗೆ ಅವರ ರಾಜೀನಾಮೆ ಅಂಗೀಕರಿಸುವುದು ಅಥವಾ ಬಿಡುವುದು ಅಧ್ಯಕ್ಷರ ನಿರ್ಧಾರಕ್ಕೆ ಬಿಟ್ಟದ್ದು, ಸದ್ಯಕ್ಕೆ ಈಗ ಅಧಿವೇಶನ ಇಲ್ಲ, ಅಧ್ಯಕ್ಷೀಯ ಚುನಾವಣೆ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂದು ರಾಜ್ಯಸಭಾ ಸದಸ್ಯ ಪ್ರಮೋದ್ ತಿವಾರಿ ಹೇಳಿದ್ದಾರೆ.
ಆದರೆ, ಹಿರಿಯರಾದ ದಿಗ್ವಿಜಯ ಸಿಂಗ್ ಮತ್ತು ಪಿ ಚಿದಂಬರಂ ಅವರು ಸಾಂವಿಧಾನಿಕ ಹುದ್ದೆಗೆ ಸ್ವಾಭಾವಿಕ ಹಕ್ಕುದಾರರಾಗಿದ್ದಾರೆ. ಪ್ರಸ್ತುತ ಪಕ್ಷವು ಉನ್ನತ ಸ್ಥಾನಕ್ಕೆ ಆಂತರಿಕ ಚುನಾವಣೆ ನಡೆಸುತ್ತಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಹೊರ ಬೀಳಲಿದೆ. 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗಾಗಲೇ 30 ಕ್ಕೂ ಹೆಚ್ಚು ಪ್ರಮುಖ ನಾಯಕರು ಬೆಂಬಲ ಘೋಷಿಸಿದ್ದಾರೆ. ಇವರರಲ್ಲಿ ದಿಪೇಂದರ್ ಹೂಡಾ, ಸಲ್ಮಾನ್ ಖುರ್ಷಿದ್, ಅಶೋಕ್ ಗೆಹ್ಲೋಟ್, ದಿಗ್ವಿಜಯ ಸಿಂಗ್, ಮನೀಶ್ ತಿವಾರಿ, ಪೃಥ್ವಿರಾಜ್ ಪ್ರಮುಖರಾಗಿದ್ದಾರೆ.
20 ನಾಮಪತ್ರ ಸಲ್ಲಿಕೆ: ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಪ್ರಕಾರ, ಶುಕ್ರವಾರ ಒಟ್ಟು 20 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುತ್ತಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟ ಪಡಿಸಿದರು. ಖರ್ಗೆಯವರು ಗಾಂಧಿ ಕುಟುಂಬದ ನಿಷ್ಠಾವಂತರು ಎನ್ನುವುದು ಬಹುತೇಕ ಬಹಿರಂಗ ಸತ್ಯ. ಜಿ-23 ಬಣ ಸೇರಿದಂತೆ ಹಲವು ಪ್ರಮುಖ ನಾಯಕರು ಖರ್ಗೆ ಅವರು ನಾಮಪತ್ರ ಸಲ್ಲಿಸುವಾಗ ಪಕ್ಕದಲ್ಲಿದ್ದರು.
ಮಲ್ಲಿಕಾರ್ಜುನ ಖರ್ಗೆ 14, ಶಶಿ ತರೂರ್ ಐದು ಮತ್ತು ಜಾರ್ಖಂಡ್ ಕಾಂಗ್ರೆಸ್ ನಾಯಕ ಕೆಎನ್ ತ್ರಿಪಾಠಿ 14 ನಾಮಪತ್ರಗಳನ್ನು ಸಲ್ಲಿಸಿದ್ದು, ಅವುಗಳನ್ನು ಸ್ವೀಕರಿಸಲಾಗಿದೆ ಎಂದು ಮಿಸ್ತ್ರಿ ಹೇಳಿದರು. ಅಭ್ಯರ್ಥಿಗಳು ತಮ್ಮ ಸ್ವಂತ ಇಚ್ಛೆಯಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಆದರೆ, ಗಾಂಧಿ ಕುಟುಂಬ ನಾಮಪತ್ರ ಸಲ್ಲಿಸಿದ ಯಾರ ಪರ ಅಥವಾ ವಿರುದ್ಧವೂ ಇಲ್ಲ. ಈ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬ ತಟಸ್ಥವಾಗಿರಲಿದೆ ಎಂದು ಮಧುಸೂದನ್ ಮಿಸ್ತ್ರಿ ಸ್ಪಷ್ಟಪಡಿಸಿದ್ದಾರೆ.
ಮೊದಲು ದಿಗ್ವಿಜಯ ಸಿಂಗ್ ಚುನಾವಣೆಗೆ ನಿಲ್ಲಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರು. ನಾಮನಿರ್ದೇಶನಕ್ಕಾಗಿ ಫಾರ್ಮ್ಗಳನ್ನು ಪಡೆದುಕೊಂಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಅಧ್ಯಕ್ಷ ಸ್ಥಾನದ ರೇಸ್ನಿಂದ ಹಿಂದೆ ಸರಿದು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಉನ್ನತ ಹುದ್ದೆಗೆ ಸೋನಿಯಾ ಗಾಂಧಿ ಆಯ್ಕೆ ಮಾಡಬಹುದೆಂಬ ಇಂಗಿತದ ಹಿನ್ನೆಲೆಯಲ್ಲಿ ಅವರು ನಿರ್ಧಾರ ಕೈಗೊಂಡರು ಎನ್ನಲಾಗಿದೆ.
ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪೈಪೋಟಿ: ಇನ್ನು ವಿಶೇಷ ಎಂದರೆ ಚಿದಂಬರಂ ಸೆಪ್ಟೆಂಬರ್ 29 ರಂದು ದಿಗ್ವಿಜಯ ಅವರನ್ನು ಭೇಟಿ ಮಾಡಿದ್ದರು. ಹೈಪ್ರೊಫೈಲ್ ಸ್ಪರ್ಧೆಯಲ್ಲಿ ಖರ್ಗೆ ಅವರ ಹೆಸರು ಮುಂಚೂಣೆಯಲ್ಲಿರುವುದರಿಂದ ಮಧ್ಯಪ್ರದೇಶಕ್ಕೆ ಸೇರಿದ ಸಿಂಗ್ ಅವರು ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ, ಮಾಜಿ ಹಣಕಾಸು ಸಚಿವ ಚಿದಂಬರಂ ಸಹ ಪ್ರಬಲ ಆಕಾಂಕ್ಷಿಯಾಗಿದ್ದು, ದಕ್ಷಿಣ ಭಾರತಕ್ಕೆ ಸೇರಿದವರಾಗಿದ್ದಾರೆ. ಪ್ರಸ್ತುತ ದಿಗ್ವಿಜಯ ಸಿಂಗ್ ಮತ್ತು ಚಿದಂಬರಂ ಇಬ್ಬರೂ ಯಾವುದೇ ಪಕ್ಷದ ಹುದ್ದೆಗಳನ್ನು ಹೊಂದಿಲ್ಲ. ಇನ್ನು ದಿಗ್ವಿಜಯ್ ಮತ್ತು ಚಿದಂಬರಂ ಹೊರತುಪಡಿಸಿ ಪಕ್ಷದ ಹೈಕಮಾಂಡ್ ಪರಿಗಣಿಸಬಹುದಾದ ಪ್ರಮುಖರಲ್ಲಿ ಜೈರಾಮ್. ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಇದ್ದಾರೆ. ಆದರೆ ಈ ಇಬ್ಬರೂ ನಾಯಕರು ಈಗ ಪಕ್ಷದ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಜೈರಾಂ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂವಹನದ ಉಸ್ತುವಾರಿ ಹೊತ್ತುಕೊಂಡಿದ್ದಾರೆ. ಇನ್ನು ವೇಣುಗೋಪಾಲ್ ಸಂಘಟನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
2019 ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಖರ್ಗೆ: 2021 ರಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ಅವರ ರಾಜ್ಯಸಭಾ ಸದಸ್ಯತ್ವ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು, ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ್ದರು. ಹಿಂದಿನ ಲೋಕಸಭೆಯಲ್ಲಿ ಖರ್ಗೆ ಪ್ರತಿ ಪಕ್ಷದ ನಾಯಕರಾಗಿದ್ದರು. 2019 ರ ಸಂಸತ್ ಚುನಾವಣೆಯಲ್ಲಿ ಖರ್ಗೆ ಸೋಲು ಅನುಭವಿಸಿದ್ದರಿಂದ ಆ ಸ್ಥಾನ ಅಧಿರಂಜನ್ ಚೌಧರಿ ಅವರ ಪಾಲಾಗಿತ್ತು. ಆ ಬಳಿಕ ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿತ್ತು.
ಉದಯಪುರದ ಕಾರ್ಯಕಾರಿಣಿಯಲ್ಲಿ ಮಹತ್ವದ ನಿರ್ಧಾರ: ಪಕ್ಷವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಲು ಕಾಂಗ್ರೆಸ್ ಮಹತ್ವದ ನಿರ್ಣಯ ಕೈಗೊಂಡಿದೆ. ಇದಕ್ಕಾಗಿಯೇ ಪಕ್ಷ ರಾಜಸ್ಥಾನದ ಉದಯಪುರದಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿತ್ತು. ಪ್ರಮುಖರ ಚಿಂತನ ಮಂಥನದಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿತ್ತು. ಅದರಲ್ಲಿ ಪ್ರಮುಖವಾಗಿ, ಒಬ್ಬ ವ್ಯಕ್ತಿ, ಒಂದು ಹುದ್ದೆ ಎಂಬ ಅತ್ಯಂತ ಪ್ರಮುಖ ನಿರ್ಧಾರವನ್ನು ಕೈಗೊಂಡಿತ್ತು. ಈ ಹಿನ್ನೆಲೆಯಲ್ಲೇ ಖರ್ಗೆ ಅವರು ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದ ಘೋಷಣೆಯನ್ನು ಅನುಸರಿಸಿದ್ದಾರೆ.
ಇದನ್ನು ಓದಿ:ಶಶಿ ತರೂರ್ ಪ್ರಣಾಳಿಕೆಯ ನಕ್ಷೆಯಲ್ಲಿ ಕಾಶ್ಮೀರ ಮಾಯ.. ಭೇಷರತ್ ಕ್ಷಮೆ ಕೋರಿದ ಹಿರಿಯ ಕಾಂಗ್ರೆಸ್ಸಿಗ
ಇತ್ತೀಚೆಗೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಎಂಬ ಅವಳಿ ಹುದ್ದೆಗಳನ್ನು ಅಲಂಕರಿಸುವ ಬಯಕೆಯನ್ನು ವ್ಯಕ್ತಪಡಿಸಿದಾಗ ಈ ನಿಯಮವನ್ನು ಅವರ ಗಮನಕ್ಕೆ ತರಲಾಗಿತ್ತು. ಹೀಗಾಗಿಯೇ ಅಶೋಕ್ ಗೆಹ್ಲೋಟ್ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಕೊನೆಗೆ ಗಾಂಧಿ ಕುಟುಂಬದ ಒತ್ತಾಯಕ್ಕೆ ಮಣಿದು ಸ್ಪರ್ಧಿಸಲು ಒಪ್ಪಿಕೊಂಡಿದ್ದರು.
ಆದರೆ ಸಿಎಂ ಸ್ಥಾನವನ್ನು ಸಚಿನ್ ಪೈಲಟ್ಗೆ ಬಿಟ್ಟುಕೊಡಲು ಒಪ್ಪದೇ, ರಾಜಸ್ಥಾನದಲ್ಲಿ ಆಂತರಿಕ ಬಂಡಾಯಕ್ಕೆ ಕಾರಣವಾಗಿತ್ತು. ಆ ಬಳಿಕ ಗೆಹ್ಲೋಟ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ಇದಾದ ಬಳಿಕ ದಿಗ್ವಿಜಯ್ ಸಿಂಗ್ ಅವರ ಹೆಸರು ಮುಂಚೂಣೆಗೆ ಬಂದಿತ್ತು. ಅದಾದ ಬಳಿಕ ಮಲ್ಲಿಕಾರ್ಜುನ್ ಹೆಸರು ದಿಢೀರ್ ಎಂದು ಚಲಾವಣೆಗೆ ಬಂದು, ಅವರೇ ಈಗ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಂತಿದ್ದು, ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ.
ಮುಂದಿನ ರಾಜ್ಯಸಭಾ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾನದಂಡಗಳು: ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಸುಳಿವನ್ನು ರಾಹುಲ್ ಗಾಂಧಿ ಮೊದಲೇ ಗೆಹ್ಲೋಟ್‌ಗೆ ಸುಳಿವು ಕೊಟ್ಟಿದ್ದರು. ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಈ ಬಾರಿ ರಾಜ್ಯಸಭೆ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಾಧಕ- ಬಾಧಕಗಳನ್ನು ಪರಿಗಣಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಹಿಂದಿ ಮಾತನಾಡುವ ನಾಯಕರನ್ನು ಹೊಂದಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಡಬೇಕಿರುವುದಿರಂದ ಹಿಂದಿ ಸುಲಭ ಹಾಗೂ ಸುಲಲಿತವಾಗಿ ಮಾತನಾಡುವ ನಾಯಕರನ್ನ ಆಯ್ಕೆ ಮಾಡಬೇಕಾಗುತ್ತದೆ.
ಹೀಗಾಗಿಯೇ ತರೂರ್ ಅವರಿಗಿಂತ ಖರ್ಗೆ ಅವರನ್ನು ಬೆಂಬಲಿಸಲು ಹೆಚ್ಚಿನ ನಾಯಕರು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಖರ್ಗೆ ಅವರು ಹಿಂದಿಯನ್ನು ಚೆನ್ನಾಗಿ ಮಾತನಾಡುವುದೇ ಅವರ ಪ್ಲಸ್ ಪಾಯಿಂಟ್. ಇನ್ನು ದಿಗ್ವಿಜಯ್ ಸಿಂಗ್ ಅವರು ಭಾಷೆಯ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ. ಮತ್ತು ಅವರು ಪಕ್ಷದ ಹಿರಿಯ ನಾಯಕರೂ ಹೌದು. ಇನ್ನು ಚಿದಂಬರಂ ಇಂಗ್ಲಿಷ್ನಲ್ಲಿ ಪ್ರಭುತ್ವ ಹೊಂದಿದ್ದು, ಬಿಜೆಪಿ ವಿರುದ್ಧ ದಾಖಲೆಗಳ ಸಮೇತ ಮಾತನಾಡುವ ಹಾಗೂ ಕಟುವಾಗಿ ಟೀಕಿಸುವ ಗುಣ ಹೊಂದಿದ್ದಾರೆ.
ಆದರೆ ಹಿಂದಿ ಪ್ರೌಡಿಮೆ ಕಡಿಮೆ ಇದು ಅವರಿಗೆ ಹಿನ್ನಡೆ ಮಾಡುವ ಸಾಧ್ಯತೆ ಇದೆ. ಇದು ಅವರ ರಾಜ್ಯಸಭೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಿತಿ ಆಗಿಯೂ ಪರಿಣಮಿಸಬಹುದು. ಇತರ ಇಬ್ಬರು ಸಂಭಾವ್ಯರ ಪೈಕಿ ಜೈರಾಂ ರಮೇಶ್ ಹಿಂದಿಯ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ. ವೇಣುಗೋಪಾಲ್ ಸಹ ಉತ್ತಮ ಭಾಷಾ ಕೌಶಲ್ಯ ಹೊಂದಿದ್ದಾರೆ. ಆದರೆ ಅವರು ಎಐಸಿಸಿಯಲ್ಲಿ ಪ್ರಬಲ ಹುದ್ದೆ ಹೊಂದಿರುವುದರಿಂದ ರಾಜ್ಯಸಭೆಗೆ ಹೋಗಲಿಕ್ಕಿಲ್ಲ ಎನ್ನಲಾಗಿದೆ.
ಇದನ್ನು ಓದಿ:ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ರಾಜೀನಾಮೆ