ಧರ್ಮಶಾಲಾ (ಹಿಮಾಚಲ ಪ್ರದೇಶ): ಐಸಿಸಿ ವಿಶ್ವಕಪ್ ಪಂದ್ಯಗಳು ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಐದು ಪಂದ್ಯಗಳು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಇದರ ನಡುವೆ ಧರ್ಮಶಾಲಾದಲ್ಲಿ ಖಲಿಸ್ತಾನ್ ಭಯೋತ್ಪಾದಕರ ದುಷ್ಕೃತ್ಯವೊಂದು ಬೆಳಕಿಗೆ ಬಂದಿದೆ. ಧರ್ಮಶಾಲಾದಲ್ಲಿ ಖಲಿಸ್ತಾನ್ ಬೆಂಬಲಿಗರು ಸರ್ಕಾರಿ ಕಚೇರಿ ಗೋಡೆಯ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಎಂಬ ಆಕ್ಷೇಪಾರ್ಹ ಘೋಷಣೆಯನ್ನು ಸ್ಪ್ರೇ ಪೇಂಟಿಂಗ್ನಿಂದ ಬರೆದಿದ್ದಾರೆ.
ಆಕ್ಷೇಪಾರ್ಹ ಘೋಷಣೆಗಳನ್ನು ಅಳಿಸಿ ಹಾಕಿದ ಪೊಲೀಸರು: ಮಾಹಿತಿ ಪ್ರಕಾರ, ಐಸಿಸಿ ವಿಶ್ವಕಪ್ ಪಂದ್ಯಕ್ಕೂ ಮುನ್ನ ಕಿಡಿಗೇಡಿಗಳು ಧರ್ಮಶಾಲಾದ ಸರ್ಕಾರಿ ಕಚೇರಿಯ ಗೋಡೆಯ ಮೇಲೆ ಖಲಿಸ್ತಾನ್ ಬೆಂಬಲಿಸಿ 'ಖಲಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಬರೆದಿದ್ದಾರೆ. ಈ ಕುರಿತು ಮಾಹಿತಿ ತಿಳಿದ ಕಾಂಗ್ರಾ ಪೊಲೀಸರು ಸ್ಥಳಕ್ಕಾಗಮಿಸಿ ಖಲಿಸ್ತಾನವನ್ನು ಬೆಂಬಲಿಸಿ ಬರೆದಿರುವ ಘೋಷಣೆಯನ್ನು ಅಳಿಸಿಹಾಕಿದ್ದಾರೆ. ಈ ವೇಳೆ ಕಾಂಗ್ರಾ ಪೊಲೀಸ್ ಉನ್ನತ ಅಧಿಕಾರಿಗಳು ಇದ್ದರು.
ಕಿಡಿಗೇಡಿಗಳ ಪತ್ತೆಗೆ ಪೊಲೀಸರ ಬಲೆ: ಈ ಕೃತ್ಯ ಎಸಗಿದ ಖಲಿಸ್ತಾನಿಗಳಿಗಾಗಿ ಕಾಂಗ್ರಾ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಇದಕ್ಕಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ಎಲ್ಲ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಇದಲ್ಲದೇ, ಸರ್ಕಾರಿ ಕಚೇರಿಯ ಸುತ್ತಲೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಿದ್ದರೆ ಎಂದು ಪೊಲೀಸರು ಸ್ಥಳೀಯರನ್ನು ವಿಚಾರಿಸುತ್ತಿದ್ದಾರೆ. ಈ ಕೃತ್ಯದ ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಧರ್ಮಶಾಲಾದ ಜಲಶಕ್ತಿ ಇಲಾಖೆಯ ಕಚೇರಿಯ ಗೋಡೆಯ ಮೇಲೆ 'ಖಲಿಸ್ತಾನ್ ಜಿಂದಾಬಾದ್' ಎಂಬ ಘೋಷಣೆಯನ್ನು ಕಪ್ಪು ಬಣ್ಣದ ಸ್ಪ್ರೇ ಪೇಂಟಿಂಗ್ನಿಂದ ಬರೆಯಲಾಗಿತ್ತು, ಅದನ್ನು ಪೊಲೀಸರು ಅಳಿಸಿಹಾಕಿದ್ದಾರೆ ಎಂದು ಕಾಂಗ್ರಾದ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ.
ಅ. 7 ರಂದು ಧರ್ಮಶಾಲಾದಲ್ಲಿ ಕ್ರಿಕೆಟ್ ಪಂದ್ಯ: ಐಸಿಸಿ ವಿಶ್ವಕಪ್ ಮೊದಲ ಪಂದ್ಯ ಅಕ್ಟೋಬರ್ 7 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ವಿಶ್ವಕಪ್ನ ಒಟ್ಟು 5 ಪಂದ್ಯಗಳು ಧರ್ಮಶಾಲಾದಲ್ಲಿ ನಡೆಯಲಿವೆ. ಪಂದ್ಯಕ್ಕೂ ಮುನ್ನ ಧರ್ಮಶಾಲಾದ ಸರ್ಕಾರಿ ಕಚೇರಿಯ ಗೋಡೆಯ ಮೇಲೆ ಖಲಿಸ್ತಾನ್ ಪರ ಘೋಷಣೆ ಬರೆಯುವ ಮೂಲಕ ಕಿಡಿಗೇಡಿಗಳು ಆತಂಕ ಸೃಷ್ಟಿಸಿದ್ದಾರೆ. ಕಾಂಗ್ರಾ ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಕೃತ್ಯದಿಂದ ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
ಬಿಕೆಐಯಿಂದ ಭಾರತದ ಭಯೋತ್ಪಾದಕರಿಗೆ ಧನಸಹಾಯ: ಇತ್ತೀಚಿಗೆ, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿರುವ ನಡುವೆ, ಯುನೈಟೆಡ್ ಕಿಂಗ್ಡಮ್ (ಯುಕೆ) ಮತ್ತು ಕೆನಡಾ ಮೂಲದ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಕಾರ್ಯಕರ್ತರು ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ತನ್ನ ಕಾರ್ಯಕರ್ತರಿಗೆ ಧನಸಹಾಯ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿತ್ತು.
ಇದನ್ನೂ ಓದಿ: ನಿಜ್ಜರ್ ಹತ್ಯೆ: ಕೆನಡಾ ತನಿಖೆ ಮುಂದುವರೆಯಲಿ, ಅಪರಾಧಿಗಳನ್ನು ನ್ಯಾಯಾಂಗ ವ್ಯಾಪ್ತಿಗೆ ತನ್ನಿ- ಅಮೆರಿಕ