ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್‌ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸುಭಾಷ್ ಶಂಕರ್ ಅವರನ್ನು ಈಜಿಪ್ಟ್‌ನಿಂದ ಮುಂಬೈಗೆ ಗಡಿಪಾರು ಮಾಡಲಾಗಿತ್ತು.
ಶಂಕರ್ ನೀರವ್ ಮೋದಿ ಕಂಪನಿಯಲ್ಲಿ ಡಿಜಿಎಂ ಫೈನಾನ್ಸ್ ಆಗಿದ್ದು, ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು. ಪಿಎನ್‌ಬಿಯ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿತ್ತು. ಸುಭಾಷ್ ಶಂಕರ್ರನ್ನು ಕರೆತರಲು ದೀರ್ಘಕಾಲದವರೆಗೆ ಶೋಧ ಕಾರ್ಯ ನಡೆಸುತ್ತಿತ್ತು. ಈಗ ಭಾರತಕ್ಕೆ ಕರೆತರುವ ಕೆಲಸ ಮಾಡಲಾಗುತ್ತಿತ್ತು. ಸದ್ಯ ಆತನನ್ನು ಬಂಧಿಸಲಾಗಿದ್ದು, ನಾವು ಅವರನ್ನು ಮುಂಬೈ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ. ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕರ್ ಅವರ ವಿರುದ್ಧ ಕ್ರಿಮಿನಲ್ ಪಿತೂರಿ, ಸಾರ್ವಜನಿಕ ಸೇವಕ ಅಥವಾ ಏಜೆಂಟರಿಂದ ಕ್ರಿಮಿನಲ್ ವಂಚನೆ, ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲಂಘನೆಯ ಆರೋಪಗಳಿವೆ. ಸಿಬಿಐ ಈಗಾಗಲೇ ನಾಲ್ಕು ವರ್ಷಗಳ ಹಿಂದೆ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಇಂಟರ್ಪೋಲ್ ಸುಭಾಷ್ ಶಂಕರ್ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಜೆ.ಸಿ. ಜಗ್ದಾಳೆ ಅವರಿದ್ದ ಸಿಬಿಐ ವಿಶೇಷ ನ್ಯಾಯಾಲಯ ಸುಭಾಷ್ ಅವರ ವಿರುದ್ಧ ಬಂಧನ ವಾರಂಟ್ ಕೂಡ ಹೊರಡಿಸಿತ್ತು.
ಸುಭಾಷ್ ಶಂಕರ್ ಅವರು 2018ರಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಜೊತೆಗೆ ವಿದೇಶಕ್ಕೆ ಓಡಿಹೋದರು. ಅವರು ನೀರವ್ ಮೋದಿಯ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟಿದ್ದು, ನೀರವ್ ಅವರ ಸಂಪೂರ್ಣ ವ್ಯವಹಾರವನ್ನು ಇವರೇ ನಿರ್ವಹಣೆ ಮಾಡುತ್ತಿದ್ದರು.
ಇದನ್ನೂ ಓದಿ:ಜಾಮೀನು ಪಡೆದ ಅತ್ಯಾಚಾರ ಆರೋಪಿ.. ಸುಪ್ರೀಂನ್ನು ಕೆರಳಿಸಿದ ‘Bhaiya Is Back’ ಪೋಸ್ಟರ್ಗಳು!