ಪಾಲಕ್ಕಾಡ್ (ಕೇರಳ): ಸಾಕು ನಾಯಿಗೆ ಆಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ತನ್ನ ಸೋದರ ಸಂಬಂಧಿಯನ್ನು ಯುವಕನೋರ್ವ ಹೊಡೆದು ಕೊಂದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ. 21 ವರ್ಷದ ಅರ್ಷದ್ ಎಂಬಾತನೇ ಕೊಲೆಯಾದ ಯುವಕನಾಗಿದ್ದು, ಕೊಲೆ ಆರೋಪಿ, 27 ವರ್ಷದ ಹಕೀಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಹಕೀಮ್ ವ್ಯಾಪಾರ ಮಾಡುತ್ತಿದ್ದು, ಆತನೊಂದಿಗೆ ಅರ್ಷದ್ ಕೂಡ ಕೆಲಸ ಮಾಡುತ್ತ, ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಆದರೆ, ಇದೇ ಗುರುವಾರ ರಾತ್ರಿ ನಾಯಿಗೆ ತಡವಾಗಿ ಆಹಾರ ನೀಡಿದ ಕ್ಷುಲ್ಲಕ ಕಾರಣಕ್ಕಾಗಿ ಅರ್ಷದ್ ಮೇಲೆ ಹಕೀಮ್ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಯಿ ಬೆಲ್ಟ್ ಮತ್ತು ದೊಣ್ಣೆಯಿಂದ ಅರ್ಷದ್ ಮೇಲೆ ಹಲ್ಲೆ ನಡೆಸಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಈ ವೇಳೆ ಆಸ್ಪತ್ರೆಗೆ ಸೇರಿಸುವುವಾಗ ಮನೆಯ ಛಾವಣಿಯಿಂದ ಬಿದ್ದಿದ್ದಾನೆ ಎಂದು ಆರೋಪಿ ಹಕೀಮ್ ವೈದ್ಯರ ಬಳಿಕ ಸುಳ್ಳು ಹೇಳಿದ್ದಾನೆ. ಆದರೆ, ದೇಹದ ಹಲವೆಡೆ ಗಾಯದ ಗುರುತು ಪತ್ತೆ ಕಂಡ ಆಸ್ಪತ್ರೆಯವರು ಅರ್ಷದ್ನ ಸಾವಿನ ಕುರಿತಂತೆ ನಮಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಅರ್ಷದ್ ಮೇಲೆ ಈ ಹಿಂದೆಯೂ ಆರೋಪಿ ಹಲ್ಲೆ ನಡೆಸುತ್ತಿದ್ದ. ಆದರೆ, ಈ ಬಾರಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಆತನ ಸಾವಿಗೆ ಕಾರಣವಾಗಿದೆ. ಶನಿವಾರ ಹಂತಕ ಹಕೀಮ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಹಿರಿಯ ಮಗನಿಗಾಗಿ 12 ವರ್ಷದ ಮಗಳನ್ನು ಬಲಿ ಪಡೆದ ತಾಯಿ!