ಎರ್ನಾಕುಲಂ(ಕೇರಳ): ವ್ಯಕ್ತಿಯೊಬ್ಬ ತ್ಯಾಜ್ಯದ ತೊಟ್ಟಿಯಲ್ಲಿ ಎಸೆದ ತರಕಾರಿಯನ್ನು ಹೆಕ್ಕಿಕೊಳ್ಳುತ್ತಿದ್ದ. ಇದನ್ನು ಕಂಡ ವ್ಯಾಪಾರಿಯೊಬ್ಬ ಇದನ್ನೇಕೆ ಸಂಗ್ರಹಿಸುತ್ತಿರುವೆ ಎಂದು ಕೇಳಿದಾಗ, ಆತ ತಾನು ಕ್ಯಾನ್ಸರ್ ರೋಗಿ ಹಣವಿಲ್ಲದೇ ಬಿಸಾಡಿದ ತರಕಾರಿಯನ್ನೇ ಒಟ್ಟು ಮಾಡಿ ಜೀವನ ಸಾಗಿಸುತ್ತಿದ್ದೇನೆ ಎನ್ನುತ್ತಾನೆ. ಇದನ್ನು ಕೇಳಿದ ಆ ವ್ಯಾಪಾರಿ ಇನ್ನು ಮುಂದೆ ಕ್ಯಾನ್ಸರ್ ರೋಗಿಗಳಿಗೆ ತನ್ನ ಅಂಗಡಿಯಲ್ಲಿ 'ಉಚಿತ ತರಕಾರಿ' ಎಂದು ಬೋರ್ಡ್ ಹಾಕಿದ.
ಇದು ಕೇರಳದ ಜೆಫಿ ಕ್ಸೇವಿಯರ್ ಎಂಬ ತರಕಾರಿ ವ್ಯಾಪಾರಿ ತೋರಿದ ಔದಾರ್ಯ. ತಮ್ಮ ಅಂಗಡಿಯ ತ್ಯಾಜ್ಯದ ತೊಟ್ಟಿಯಲ್ಲಿ ಎಸೆದ ತರಕಾರಿಯನ್ನು ಸಂಗ್ರಹಿಸುತ್ತಿದ್ದ ಕ್ಯಾನ್ಸರ್ ವ್ಯಕ್ತಿಯನ್ನು ಪ್ರಶ್ನಿಸಿ ವಿಷಯ ತಿಳಿದುಕೊಂಡಾಗ ಇನ್ನು ಮುಂದೆ ತಾನು ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ತರಕಾರಿಯನ್ನು ನೀಡಲು ನಿಶ್ಚಯಿಸಿದರು.
ಅದರಂತೆಯೇ ಅವರು ಫ್ರೀಯಾಗಿ ತರಕಾರಿಯನ್ನು ನೀಡುತ್ತಿದ್ದಾರೆ. ಇದನ್ನು ಅವರು ಕಳೆದ 5 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರಂತೆ. ಜೆಫಿ ಕ್ಸೇವಿಯರ್ ನಡೆಸುವ ಕಾಲೂರು, ಆಲುವಾ, ಪುಳಿಂಜೋಡು, ಅಂಗಮಾಲಿ, ವೈಟಿಲದ ಅಂಗಡಿಗಳಲ್ಲೂ ಕ್ಯಾನ್ಸರ್ ಪೀಡಿತರಿಗೆ ಉಚಿತ ತರಕಾರಿ ಎಂಬ ಬೋರ್ಡ್ ಹಾಕಲಾಗಿದೆ.
ಸುಮಾರು 200 ಕ್ಯಾನ್ಸರ್ ಪೀಡಿತರು ಈಗ ಜೆಫಿ ಕ್ಸೇವಿಯರ್ ಅವರ ಅಂಗಡಿಗಳಲ್ಲಿ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿಯೂ ಅವರು ವಿತರಣೆಯನ್ನು ನಿಲ್ಲಿಸಿಲ್ಲವಂತೆ. ರೋಗಿಗಳ ಮನೆಗಳಿಗೇ ತೆರಳಿ ಅವರು ನಿತ್ಯವೂ ತರಕಾರಿ ಕಿಟ್‌ಗಳನ್ನು ತಲುಪಿಸುತ್ತಿದ್ದರು. ಖ್ಯಾತ ಆಂಕೊಲಾಜಿಸ್ಟ್ ಡಾ.ವಿ.ಪಿ.ಗಂಗಾಧರನ್ ಅವರು ಸ್ವತಃ ಜೆಫಿ ಅವರ ಅಂಗಡಿಗೆ ಆಗಮಿಸಿ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
"ಹೆಮ್ಮಾರಿ ಕ್ಯಾನ್ಸರ್ಗೆ ತುತ್ತಾದ ವ್ಯಕ್ತಿಗಳು ಅದರ ಚಿಕಿತ್ಸೆಗೆಂದೇ ಹಣ ಹೊಂದಿಸಲು ಪರದಾಡುತ್ತಾರೆ. ಜೀವನಕ್ಕಾಗಿ ಕಷ್ಟಪಡುವ ಅವರಿಗೆ ನೆರವಾಗಲೆಂದು ನನ್ನಿಂದಾಗುವ ಸಹಾಯವನ್ನು ಮಾಡುತ್ತಿದ್ದೇನೆ. ಕ್ಯಾನ್ಸರ್ ಪೀಡಿತರಿಗೆ ನಮ್ಮ ಅಂಗಡಿಗಳಲ್ಲಿ ತರಕಾರಿಯನ್ನು ಉಚಿತವಾಗಿ ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 3 ದಿನ ಮೊದಲೇ ಭಾರತ ಪ್ರವೇಶಿಸಿದ ನೈಋತ್ಯ ಮಾನ್ಸೂನ್; ಈ ರಾಜ್ಯಗಳಲ್ಲಿ ಅತಿ ಹೆಚ್ಚು ಮಳೆಯಂತೆ!