ಪಾಲಕ್ಕಾಡ್ (ಕೇರಳ) : ಕೇರಳದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿಗಳು ದುಷ್ಕೃತ್ಯ ಎಸಗಲು ಇಂಧನವನ್ನು ಹೇಗೆ ಸಂಗ್ರಹಿಸಿದ್ದರು ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿ ಶಾರುಖ್ ಸೈಫಿ ಪೆಟ್ರೋಲ್ ಖರೀದಿಸಿದ ಫಿಲ್ಲಿಂಗ್ ಸ್ಟೇಷನ್ ಪತ್ತೆ ಮಾಡಲು ಆಟೋರಿಕ್ಷಾ ಚಾಲಕರೊಬ್ಬರು ಪೊಲೀಸರಿಗೆ ಸಹಾಯ ಮಾಡಿದ್ದಾರೆ. ಆರೋಪಿಯು ಶೋರ್ನೂರ್ ಪೆಟ್ರೋಲ್ ಪಂಪ್‌ನಿಂದ ಇಂಧನವನ್ನು ಖರೀದಿಸಿ ನಂತರ ಚಲಿಸುತ್ತಿದ್ದ ರೈಲಿಗೆ ಬೆಂಕಿ ಹಚ್ಚಲು ಬಳಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಆರೋಪಿ ಶಾರುಖ್ ಸೈಫಿಯ ಬಂಧನದ ವಿಡಿಯೋ ದೃಶ್ಯ ಟಿವಿಯಲ್ಲಿ ಬಂದ ನಂತರ ಆಟೋರಿಕ್ಷಾ ಚಾಲಕ ಆತನನ್ನು ಗುರುತಿಸಿದ್ದಾನೆ. ಶಾರುಖ್ ತನ್ನ ಆಟೋದಲ್ಲಿ ಹತ್ತಿದ ಬಗ್ಗೆ ಚಾಲಕ ತನ್ನ ಸ್ನೇಹಿತನಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲ, ಅವನ ಸ್ನೇಹಿತ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದನು. ಇದಾದ ನಂತರ ಪೊಲೀಸರು ಆಟೋ ಚಾಲಕನಿಂದ ವಿವರ ಸಂಗ್ರಹಿಸಿ ಶೋರ್ನೂರ್ ಪೆಟ್ರೋಲ್ ಪಂಪ್‌ಗೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಫೂಟೇಜ್‌ನಿಂದ ಆ ಅದೃಷ್ಟದ ದಿನದಂದು ಆ ಪಂಪ್‌ನಿಂದ ಇಂಧನವನ್ನು ಖರೀದಿಸಿದವರು ಶಾರುಖ್ ಸೈಫಿ ಎಂದು ಪೊಲೀಸರು ದೃಢಪಡಿಸಿದರು.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಆರೋಪಿ ಶಾರುಖ್ ಶೋರ್ನೂರ್ ರೈಲ್ವೆ ನಿಲ್ದಾಣದಲ್ಲಿ ಇಳಿದು ಹೊರಬಂದು ಅಲ್ಲಿ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ದೂರದಲ್ಲಿರುವ ಯಾವುದಾದ್ರೂ ಪೆಟ್ರೋಲ್ ಪಂಪ್‌ಗೆ ಹೋಗುವಂತೆ ಆಟೋ ಚಾಲಕನಿಗೆ ಆರೋಪಿ ಶಾರುಖ್ ಸೂಚಿಸಿದ್ದಾನೆ. ರೈಲು ನಿಲ್ದಾಣದಿಂದ ಒಂದೂವರೆ ಕಿಲೋಮೀಟರ್ ದೂರವಿದ್ದ ಪೆಟ್ರೋಲ್ ಪಂಪ್‌ಗೆ ಆಟೋ ಚಾಲಕ ಆರೋಪಿ ಶಾರುಖ್ ಅನ್ನು ಕರೆದೊಯ್ದಿದ್ದಾನೆ. ಸಮೀಪದ ಪೆಟ್ರೋಲ್ ಪಂಪ್‌ಗೆ ಹೋದ್ರೆ ಪೊಲೀಸರಿಗೆ ಸುಳಿವು ಸಿಗಬಹುದೆಂದು ಆರೋಪಿ ದೂರದ ಪೆಟ್ರೋಲ್ ಪಂಪ್‌ಗೆ ತೆರಳಿದ್ದಾನೆ. ಶಾರುಖ್ ಶೋರ್ನೂರಿನಲ್ಲಿ ಸುಮಾರು 14 ಗಂಟೆಗಳ ಕಾಲ ಕಳೆದಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಯೂಟ್ಯೂಬರ್ ಆಗಿದ್ದ ಆರೋಪಿ ಶಾರುಖ್ ಸೈಫಿ: ಈ ಹಿಂದೆ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮೂಲದ ಆರೋಪಿ ಶಾರುಖ್ ಸೈಫಿ ಯೂಟ್ಯೂಬರ್ ಆಗಿದ್ದ ಎಂಬ ವಿಷಯ ಬಹಿರಂಗವಾಗಿತ್ತು. ಪೀಠೋಪಕರಣಗಳ ತಯಾರಿಕೆ ಕುರಿತ ವಿಡಿಯೋಗಳನ್ನು ಮಾಡಿ ಆರೋಪಿ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡುತ್ತಿದ್ದ. ಏಪ್ರಿಲ್ 2ರಂದು ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾರುಖ್ ಸೈಫಿ ಪ್ರಯಾಣಿಸುತ್ತಿದ್ದ. ಕೋಯಿಕ್ಕೋಡ್ ಜಿಲ್ಲೆಯ ಎಲತ್ತೂರು ಸಮೀಪದ ಕೊರಪುಳ ಸೇತುವೆ ಬಳಿ ಟ್ರೈನ್ನ ಡಿ1 ಕಂಪಾರ್ಟ್ಮೆಂಟ್ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದನು. ಘಟನೆಯಲ್ಲಿ ಮಗು, ಮಹಿಳೆ ಸೇರಿ ಮೂವರು ಸಹಪ್ರಯಾಣಿಕರು ಸಾವನ್ನಪ್ಪಿದ್ದರು. ಇತರ 9 ಮಂದಿ ಗಾಯಗೊಂಡಿದ್ದರು. ಮಂಗಳವಾರ ರಾತ್ರಿ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಶಾರುಖ್ ಸೈಫಿಯನ್ನು ಕೇಂದ್ರ ಗುಪ್ತಚರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕೇರಳ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಶಂಕಿತನನ್ನು ಹಿಡಿದು ವಿಚಾರಣೆ ನಡೆಸಿತು. ಘೋರ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಕೇರಳ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗೆ ಪೊಲೀಸ್ ಕಸ್ಟಡಿ: ಯೂಟ್ಯೂಬರ್ ಆಗಿದ್ದ ಶಾರುಖ್ ಸೈಫಿ