ಕಣ್ಣೂರು : ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳನ್ನು ಗೆದ್ದ ಹದಿಹರೆಯದ ಯುವಕನೀಗ (ವಿದ್ಯಾರ್ಥಿ) ಜೀವನ ನಿರ್ವಹಣೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.
ದಕ್ಷಿಣ ವಲಯ ಅಥ್ಲೆಟಿಕ್ ಮೀಟ್ನಲ್ಲಿ 5,000 ಮೀಟರ್ ನಡಿಗೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಕಣ್ಣೂರಿನ ಕಂಗೋಲ್ ಮೂಲದ 10ನೇ ತರಗತಿ ವಿದ್ಯಾರ್ಥಿ ಮುತ್ತುರಾಜ್ ಇದೀಗ ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.
ಮುತ್ತುರಾಜ್ ಅವರು 5ನೇ ತರಗತಿಯಲ್ಲಿದ್ದಾಗ ತಮ್ಮ ಮೊದಲ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಅವರ ದೈಹಿಕ ಶಿಕ್ಷಕ ಕಾಂಗೋಲ್‌ನ ಕರುಣನ್ ಮಾಸ್ಟರ್ ಅವರಿಗೆ ತರಬೇತಿ ನೀಡುತ್ತಿದ್ದರು. ತಮ್ಮ ಮೊದಲ ಅಥ್ಲೆಟಿಕ್ ಸ್ಪರ್ಧೆಯಲ್ಲಿಯೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಪದಕಗಳನ್ನು ಗೆದ್ದಿದ್ದರು. ಆದ್ರೀಗ, ಮನೆ ಮನೆಗೆ ತೆರಳಿ ಸಾಣೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾದರೂ ಜೀವನಕ್ಕಾಗಿ ಕಿರಾಣಿ ಅಂಗಡಿಯಲ್ಲಿ ಕೆಲಸ
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತನ್ನ ತಾಯಿಗೆ ಔಷಧ ಖರೀದಿಸುವುದರಿಂದ ಹಿಡಿದು ಇತರೆ ಜವಾಬ್ದಾರಿಗಳನ್ನು ತಮ್ಮ ಮೇಲೆ ಹೊತ್ತುಕೊಂಡಿದ್ದಾರೆ ಮುತ್ತುರಾಜ್. ತಂದೆ ದೈನಂದಿನ ಕೂಲಿ ಕಾರ್ಮಿಕರಾಗಿದ್ದು, 8 ಜನರಿರುವ ಕುಟುಂಬವನ್ನು ಪೋಷಿಸಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.
ಮುತ್ತುರಾಜ್ ಎಲಾಯಾವೂರಿನಲ್ಲಿ ಸಿಹೆಚ್‌ಎಂಹೆಚ್‌ಎಸ್ಎಸ್ ಕ್ರೀಡಾ ಶಾಲೆಯ ವಿದ್ಯಾರ್ಥಿಯಾಗಿದ್ದು, ಕೆಲವೊಮ್ಮೆ ತನ್ನ ಆನ್‌ಲೈನ್ ತರಗತಿಗಳನ್ನು ಸಹ ಬಿಟ್ಟುಬಿಟ್ಟಿದ್ದಾನೆ. ಜನಪ್ರಿಯ ಕ್ರೀಡಾಪಟುವಾಗುವುದು ಮತ್ತು ತನ್ನ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವುದೇ ಈತನ ಮಹತ್ವಾಕಾಂಕ್ಷೆ. ಇನ್ನಾದ್ರೂ ಸರ್ಕಾರ ಈ ಪ್ರತಿಭಾನ್ವಿತ ವಿದ್ಯಾರ್ಥಿಯೆಡೆಗೆ ಗಮನ ಹರಿಸಬೇಕಾಗಿದೆ.