ತಿರುವನಂತಪುರಂ (ಕೇರಳ) : ದೇಶದಲ್ಲಿ ಹದಗೆಡುತ್ತಿರುವ ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆ ಕೇರಳ ಸರ್ಕಾರ ರಾಜ್ಯಾದ್ಯಂತ ಆಸ್ಪತ್ರೆಗಳ ಬೇಡಿಕೆಗಳನ್ನು ಪೂರೈಸಲು ‘ಆಮ್ಲಜನಕ ವಾರ್ರೂಂ’ ಮತ್ತು ‘ಆಮ್ಲಜನಕ ಸಂಗ್ರಹ ಕೇಂದ್ರ’ ಸ್ಥಾಪಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆ ಆಸ್ಪತ್ರೆಗಳ ಬೇಡಿಕೆಗಳನ್ನು ಪೂರೈಸಲು ತಿರುವನಂತಪುರಂನ ಸರ್ಕಾರಿ ಕಾಲೇಜಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ.
"ನಮ್ಮನ್ನು ಜಿಲ್ಲಾಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ನಾವು 24/7 ಕೆಲಸ ಮಾಡುತ್ತೇವೆ. ನಮ್ಮಲ್ಲಿ ಆಸ್ಪತ್ರೆಗಳಿಗೆ ನೋಂದಣಿಗೆ ಪೋರ್ಟಲ್ ವ್ಯವಸ್ಥೆ ಇದೆ. ನಾವು ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೆ ಆಮ್ಲಜನಕ ಒದಗಿಸುತ್ತೇವೆ.
ಆಮ್ಲಜನಕದ ಅಗತ್ಯವಿರುವ ಆಸ್ಪತ್ರೆಗಳು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು. ಅದರ ಆಧಾರದ ಮೇಲೆ, ನಾವು ಆಮ್ಲಜನಕವನ್ನು ಒದಗಿಸುತ್ತೇವೆ. ಇದನ್ನು ಮೇಲ್ವಿಚಾರಣೆ ಮಾಡುವ 20 ಸ್ವಯಂಸೇವಕರು ಮತ್ತು 4 ವೈದ್ಯರು ಇಲ್ಲಿದ್ದಾರೆ. ನಮ್ಮಲ್ಲಿ ಬಫರ್ ವ್ಯವಸ್ಥೆ ಇದೆ ಮತ್ತು ಸಾಕಷ್ಟು ಆಮ್ಲಜನಕವಿದೆ" ಎಂದು ಆಮ್ಲಜನಕ ವಾರ್ರೂಂ ಉಸ್ತುವಾರಿ ಡಾ.ಜಾಕೋಬ್ ಹೇಳಿದರು.
ಇದನ್ನೂ ಓದಿ: ಹಿರಿಯ ಕಮ್ಯುನಿಸ್ಟ್ ನಾಯಕಿ, ಕೇರಳದ ಮೊದಲ ಕಂದಾಯ ಸಚಿವೆ ಗೌರಿಯಮ್ಮ ಇನ್ನಿಲ್ಲ
ಕೇರಳದಲ್ಲಿ ಸೋಮವಾರ 27,487 ಹೊಸ ಕೋವಿಡ್-19 ಪ್ರಕರಣಗಳು ಮತ್ತು 65 ಸಾವುಗಳು ದಾಖಲಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,19,726 ತಲುಪಿದೆ. ಪಾಸಿಟಿವ್ ಪ್ರಮಾಣವು ಶೇ. 27.56 ರಷ್ಟಿದೆ ಎಂದು ರಾಜ್ಯ ಸರ್ಕಾರ ತನ್ನ ದೈನಂದಿನ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ.
ಏತನ್ಮಧ್ಯೆ, ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ 1,000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಜ್ಯ ವೈದ್ಯಕೀಯ ಅಧಿಕಾರಿಗಳ ಸಂಸ್ಥೆ ತಿಳಿಸಿದೆ.