ತಿರುವನಂತಪುರಂ : ಕೇರಳ ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಗಳು ಅಂತಿಮ ಘಟ್ಟ ತಲುಪಿವೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಪ್ರಾರಂಭಿಸಿವೆ.
ಎಲ್‌ಡಿಎಫ್, ಯುಡಿಎಫ್ ಮತ್ತು ಎನ್‌ಡಿಎ ಸೇರಿ ಎಲ್ಲಾ ಮೈತ್ರಿ ಕೂಟದ ಪಕ್ಷಗಳು ತಮ್ಮ ಘೋಷಿತ ಅಭ್ಯರ್ಥಿಗಳು ಹಾಗೂ ಅವರ ಕ್ಷೇತ್ರಗಳನ್ನ ಬದಲಾಯಿಸುತ್ತಿವೆ. ಹೊಸ ಅಭ್ಯರ್ಥಿಗಳಿಗೆ ಸ್ಥಾನಗಳ ಮರು ಹಂಚಿಕೆ ಮಾಡುತ್ತಿವೆ. ಪ್ರತಿ ದಿನ ಅಭ್ಯರ್ಥಿಗಳ ಅಂತಿಮ ಪಟ್ಟಿಯಲ್ಲಿ ತಿರುವು-ಮರುವು ಪಡೆದುಕೊಳ್ಳುತ್ತಿದ್ದು, ಮತದಾರರು ಹಾಗೂ ಕಾರ್ಯಕರ್ತರಲ್ಲಿ ಸ್ವಲ್ಪ ಮಟ್ಟಿನ ಆತಂಕ ಕಂಡು ಬರುತ್ತಿದೆ.
ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮೊದಲು ಘೋಷಿಸಿದ್ದ ಕಮ್ಯುನಿಸ್ಟ್ ಪಾರ್ಟಿ ಮಾರ್ಕ್ಸ್‌ವಾದಿ (ಸಿಪಿಎಂ) ಇತಿಹಾಸದಲ್ಲಿ ಮೊದಲ ಬಾರಿಗೆ ಮಿತ್ರನಿಗೆ ನೀಡಿದ್ದ ಸ್ಥಾನವನ್ನು ಮರಳಿ ಪಡೆದುಕೊಂಡಿತು. ಸಿಪಿಎಂ ಅಭ್ಯರ್ಥಿಗೆ ಮರು ಹಂಚಿಕೆ ಮಾಡಿದೆ.
ಕುಟ್ಟಿಯಾಡಿ ಕ್ಷೇತ್ರದಲ್ಲಿ ಮರು ಹಂಚಿಕೆ ಮಾಡಲಾಗಿದೆ. ಅಲ್ಲಿನ ಕಾರ್ಯಕರ್ತರು ಎಲ್‌ಡಿಎಫ್‌ನ ಹೊಸ ಮಿತ್ರರಾದ ಕೇರಳ ಕಾಂಗ್ರೆಸ್ (ಎಂ) ಜೋಸ್ ಬಣಕ್ಕೆ ಸೀಟು ನೀಡುವುದರ ವಿರುದ್ಧ ಹಲವು ವಾರಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ಕೊನೆಗಳಿಗೆಯಲ್ಲಿ ಸಿಪಿಎಂ ಅನಿರೀಕ್ಷಿತವಾಗಿ ಎಂಬಂತೆ ಮರು ಹಂಚಿಕೆ ಮಾಡಿದೆ.
ಕೇರಳ ಕಾಂಗ್ರೆಸ್ (ಎಂ) ತಮ್ಮ ಅಭ್ಯರ್ಥಿಯನ್ನು ಹಿಂತೆಗೆದುಕೊಂಡು ಸ್ಥಾನ ಹಿಂದಿರುಗಿಸಿದ್ದರಿಂದ ಪಕ್ಷವು ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿ ಸಿಪಿಎಂ ಅಭ್ಯರ್ಥಿಗೆ ಸ್ಥಾನ ನೀಡಲು ನಿರ್ಧರಿಸಿದೆ. ಪಕ್ಷವು ಆರಂಭದಲ್ಲಿ ಘೋಷಿಸಿದ ಅಭ್ಯರ್ಥಿಯನ್ನು ಸಿಪಿಐ ಬದಲಾಯಿಸಿತು.
ತಿರೂರಂಗಡಿಯಲ್ಲಿ ಸಿಪಿಐ ಅಜಿತ್ ಕೋಲಾಡಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಈಗ ಎಲ್‌ಡಿಎಫ್ ಸ್ವತಂತ್ರ ಅಭ್ಯರ್ಥಿ ನಿಯಾಸ್ ಪುಲಿಕಕ್ಕಂ ಅವರನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಮುಸ್ಲಿಂ ಲೀಗ್ ಅಭ್ಯರ್ಥಿ ಕೆಪಿಎ ಮಜೀದ್ ವಿರುದ್ಧ ತಮ್ಮದೇ ಪಕ್ಷದೊಳಗೆ ಆಕ್ಷೇಪ ವ್ಯಕ್ತವಾದ ನಂತರ, 2016ರಲ್ಲಿ ಸ್ವತಂತ್ರರಾಗಿ ಸ್ಪರ್ಧಿಸಿ ಉತ್ತಮ ಮತಗಳಿಕೆ ಮಾಡಿದ್ದ ಎಲ್‌ಡಿಎಫ್ ಸ್ವತಂತ್ರ ಅಭ್ಯರ್ಥಿ ನಿಯಾಸ್ ಅವರನ್ನು ಬೆಂಬಲಿಸಲು ಸಿಪಿಐ ನಿರ್ಧರಿಸಿದೆ.
ಯುಡಿಎಫ್ ಮತ್ತು ಕಾಂಗ್ರೆಸ್‌ನಲ್ಲಿ ವಾಗ್ವಾದ, ಹೆಸರು ಬದಲಾವಣೆ ಮತ್ತು ಅಭ್ಯರ್ಥಿಗಳ ಬದಲಾವಣೆ ಇದೀಗ ಪ್ರಾರಂಭವಾಗಿವೆ ಎಂಬುದು ಕಾಣುತ್ತಿದೆ. ನಾಯಕತ್ವದ ಅಭ್ಯರ್ಥಿ ಆಯ್ಕೆಯ ವಿರುದ್ಧ ಸಿಡಿದೆದ್ದು ಬಹಿರಂಗವಾಗಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಮುಖಂಡ ಲತಿಕಾ ಸುಭಾಷ್ ಅವರು ಸೋಮವಾರ ಎಐಸಿಸಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ತಾವು ಎತ್ತುಮನೂರ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದರು.
ಇದನ್ನೂ ಓದಿ: "ಲಾಭ ಖಾಸಗೀಕರಣ - ನಷ್ಟ ರಾಷ್ಟ್ರೀಕರಣ": ಕೇಂದ್ರದ ವಿರುದ್ಧ ರಾಹುಲ್ ಆಕ್ರೋಶ
ಕೋಯಿಕೋಡ್‌ನ ವಡಕಾರ ಕ್ಷೇತ್ರದಲ್ಲಿ ಯುಡಿಎಫ್‌ನಲ್ಲಿ ಅನಿರೀಕ್ಷಿತ ತಿರುವು ಕಂಡು ಬಂದಿದೆ. ಕ್ರಾಂತಿಕಾರಿ ಮಾರ್ಕ್ಸ್‌ವಾದಿ ಪಕ್ಷದ (ಆರ್‌ಎಂಪಿ) ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿಥಲಾ ಅವರು ವಡಕಾರ ಕ್ಷೇತ್ರದಿಂದ ಸ್ಪರ್ಧಿಸಲು ಕೆಕೆ ರೆಮಾ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರೆಮಾ ಸ್ಪರ್ಧಿಸಿದರೇ ಅವರನ್ನು ಬೆಂಬಲಿಸುವುದಾಗಿ ಯುಡಿಎಫ್ ಈ ಹಿಂದೆ ಹೇಳಿತ್ತು. ಆದರೆ, ಭಾನುವಾರದವರೆಗೆ ತಾನು ಅಭ್ಯರ್ಥಿಯಾಗುವುದಿಲ್ಲ ಎಂದು ರೇಮಾ ಹೇಳಿದ್ದರು. ಈ ಹಿಂದಿನ ನಿರ್ಧಾರ ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದು, ವಡಕಾರದಲ್ಲಿ ಕಠಿಣ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.
ಇದುವರೆಗೆ ಘೋಷಿಸದ 6 ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಾನ ನೀಡುವುದು ಕಾಂಗ್ರೆಸ್ನ ಇತ್ತೀಚಿನ ಯೋಜನೆಯಾಗಿದೆ. ಈ ನಿರ್ಧಾರವು ಲತಿಕಾ ಸುಭಾಷ್ ಅವರ ಪ್ರತಿಭಟನೆಯ ಫಲವೆಂದು ಭಾವಿಸಲಾಗಿದೆ. ಕಣ್ಣೂರಿನ ಇರಿಕೂರ್‌ನಲ್ಲಿ ಘೋಷಿತ ಅಭ್ಯರ್ಥಿಯನ್ನು ಬದಲಾಯಿಸುವ ಬೇಡಿಕೆಯು ಕಣ್ಣೂರು ಕಾಂಗ್ರೆಸ್‌ನಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಹಿರಿಯ ನಾಯಕರು ಇರಿಕೂರ್‌ನ ಪ್ರಾದೇಶಿಕ ಮುಖಂಡರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನಲ್ಲೂ ಘೋಷಿತ ಅಭ್ಯರ್ಥಿಗಳನ್ನು ಬದಲಾಯಿಸುವ ಬೇಡಿಕೆಗಳು ಪ್ರಬಲವಾಗಿವೆ. ಕಲಾಮಶೇರಿಯಲ್ಲಿ ಘೋಷಿತ ಅಭ್ಯರ್ಥಿ ವಿ ಎಂ ಅಬ್ದುಲ್ ಗಫೂರ್ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಮಂಕಡ ಕ್ಷೇತ್ರದಲ್ಲಿ ಸ್ಥಾನ ನಿರಾಕರಿಸಿದ ಅಹಮದ್ ಕಬೀರ್ ಕಲಾಮಶೇರಿಯಲ್ಲಿ ಧ್ವನಿ ಎತ್ತಿದ್ದರು. ಬಿಜೆಪಿ ಪಾಳೆಯದಲ್ಲಿ ಇತರೆ ಪಕ್ಷಗಳಿಗಿಂತ ಸ್ವಲ್ಪ ಭಿನ್ನವಾಗಿವೆ. ಮನಂತವಡಿ ಕ್ಷೇತ್ರಕ್ಕೆ ದೆಹಲಿಯಲ್ಲಿ ರಾಷ್ಟ್ರೀಯ ನಾಯಕತ್ವ ಘೋಷಿಸಿದ ಅಭ್ಯರ್ಥಿ ಮಣಿಕಂದನ್ ಟಿಕೆಟ್ ತಿರಸ್ಕರಿಸಿದೆ.
ಎತ್ತುಮನೂರ್ ಮತ್ತು ತಿರುವಲ್ಲಾದಲ್ಲಿ ಘೋಷಿಸಲಾದ ಅಭ್ಯರ್ಥಿಗಳನ್ನು ಬದಲಾಯಿಸುವ ಬೇಡಿಕೆಗಳು ಎನ್‌ಡಿಎಯಲ್ಲಿಯೂ ಸಾರ್ವಜನಿಕವಾಗಿ ಹೊಗೆಯಾಡುತ್ತಿದೆ. ಕಳೆದ ಹಲವು ದಿನಗಳಿಂದ ಬಿಜೆಪಿಯ ಅಭ್ಯರ್ಥಿ ಘೋಷಣೆಗೆ ಸಂಬಂಧಿಸಿದಂತೆ ಸಸ್ಪೆನ್ಸ್ ಕ್ಷೇತ್ರವಾಗಿರುವ ಕಯಕ್ಕೂಟ್ಟಂನಲ್ಲಿ ಇತ್ತೀಚಿನ ಮಾಹಿತಿಯಂತೆ ರಾಷ್ಟ್ರೀಯ ಬಿಜೆಪಿ ಮುಖಂಡ ಶೋಭಾ ಸುರೇಂದ್ರನ್ ಸ್ಪರ್ಧಿಸಲಿದ್ದಾರೆ.
ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರ ನಿರ್ಧಾರವನ್ನು ಶೋಭಾ ಸುರೇಂದ್ರನ್ ಅಪಹಾಸ್ಯ ಮಾಡಿದ್ದರು. ಸೋಮವಾರ, ಕೆ ಸುರೇಂದ್ರನ್ ಅವರೇ ಶೋಭಾ ಸುರೇಂದ್ರನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಆದರೆ, ಅವರು ಕ್ಷೇತ್ರ ಯಾವುದೇಂದು ನಿರ್ದಿಷ್ಟವಾಗಿ ತಿಳಿಸಿಲ್ಲ.