ಕೊಚ್ಚಿ (ಕೇರಳ): ಸ್ನೇಹಿತನ ಮನೆಯಿಂದ 10 ಸವರನ್ ಚಿನ್ನಾಭರಣ ಕಳವು ಮಾಡಿದ ಆರೋಪದಡಿ ಕೊಚ್ಚಿಯ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್ಸ್ಟೇಬಲ್ನನ್ನು ಬಂಧಿಸಲಾಗಿದೆ.
ಅಲಪ್ಪುಳ ಜಿಲ್ಲೆಯ ಅರೂರ್ ಮೂಲದ ಅಮಲ್ ದೇವ್ ಬಂಧಿತ ಆರೋಪಿ. ಅಕ್ಟೋಬರ್ 13 ರಂದು ಜಾರಕ್ಕಲ್‌ನಲ್ಲಿರುವ ತನ್ನ ಸ್ನೇಹಿತ ನಟೇಶ ಎಂಬುವವರ ಮನೆಯಲ್ಲಿ ಅಮಲ್ ದೇವ್ ಚಿನ್ನಾಭರಣಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಆನ್‌ಲೈನ್‌ನಲ್ಲಿ ರಮ್ಮಿ ಆಡುವುದಕ್ಕಾಗಿ ಹಣ ಪಡೆಯಲು ಚಿನ್ನಾಭರಣಗಳನ್ನು ಕದ್ದಿರುವುದಾಗಿ ವಿಚಾರಣೆ ವೇಳೆ ಅಮಲ್ ದೇವ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನಾವು ತನಿಖೆ ನಡೆಸಬೇಕಾಗಿದೆ. ದೂರುದಾರರು ಮತ್ತು ಆರೋಪಿ ಬಾಲ್ಯದ ಸ್ನೇಹಿತರು. ಆದ್ದರಿಂದ ಆರೋಪಿಯು ದೂರುದಾರನ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು. ಕುಟುಂಬದವರು ಆರೋಪಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ನಾವು ಅವರನ್ನು ವಿಚಾರಣೆಗೆ ಒಳಪಡಿಸಿದೆವು ಎಂದು ಪೊಲೀಸರು ಮಾಹಿತಿ ನೀಡಿದರು.
ಐಪಿಸಿ ಸೆಕ್ಷನ್ 179ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕದ್ದ ಕೆಲವು ಆಭರಣಗಳನ್ನು ಎರ್ನಾಕುಲಂ ಮತ್ತು ಜಾರಕ್ಕಲ್ ಪ್ರದೇಶಗಳಲ್ಲಿ ಗಿರವಿ ಇಡಲಾಗಿತ್ತು. ಸದ್ಯ ಪೊಲೀಸರು ಎಲ್ಲ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಆರೋಪ : ಪೊಲೀಸ್ ಕಾನ್ಸ್ಟೇಬಲ್ ಬಂಧನ
ಇದು ರಾಜ್ಯ ಪೊಲೀಸ್ ಪಡೆಯಲ್ಲಿ ನಡೆದ ಎರಡನೇ ಘಟನೆಯಾಗಿದ್ದು, ಪೊಲೀಸ್ ಇಲಾಖೆಯ ಘನತೆಗೆ ಚ್ಯುತಿ ತಂದಿದೆ. ಈ ಹಿಂದೆ ಕೊಲ್ಲಂನ ಕಂಜಿರಪಲ್ಲಿಯಲ್ಲಿ ಅಂಗಡಿಯೊಂದರಿಂದ ಮಾವಿನ ಹಣ್ಣುಗಳನ್ನು ಕದ್ದ ಆರೋಪದಡಿ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸಿಸಿಟಿವಿ ದೃಶ್ಯಗಳಲ್ಲಿ ಪೊಲೀಸರು ಅಂಗಡಿಯಿಂದ ಮಾವಿನ ಹಣ್ಣುಗಳನ್ನು ಕದಿಯುತ್ತಿರುವುದು ಸೆರೆಯಾಗಿತ್ತು. ಪ್ರಕರಣ ಸಂಬಂಧ ಕಾಂಜಿರಪಲ್ಲಿ ಪೊಲೀಸರು ಇಡುಕ್ಕಿ ಎಆರ್ ಕ್ಯಾಂಪ್‌ನ ಪೊಲೀಸ್ ಅಧಿಕಾರಿ ಶಿಹಾಬ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಅವರು ಸೆಪ್ಟೆಂಬರ್ 30 ರಂದು ಅಂಗಡಿಯೊಂದರಿಂದ 10 ಕೆ.ಜಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಶಿಹಾಬ್ ಅವರು ಕರ್ತವ್ಯದಿಂದ ಮನೆಗೆ ವಾಪಸ್ ಆಗುವಾಗ ಅಂಗಡಿಯಲ್ಲಿದ್ದ ಮಾವಿನ ಹಣ್ಣುಗಳನ್ನು ಕದ್ದೊಯ್ದಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಅಂಗಡಿ ಮಾಲೀಕರು ಪೊಲೀಸರನ್ನು ಸಂಪರ್ಕಿಸಿದಾಗ ಶಿಹಾಬ್ ತಲೆಮರೆಸಿಕೊಂಡಿದ್ದರು. ಬಳಿಕ ಎರಡು ದಿನಗಳ ನಂತರ ಅಂಗಡಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದು, ದೂರು ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಅಂಗಡಿ ಮಾಲೀಕರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಪಡಿಸಿತು.
ಇದನ್ನೂ ಓದಿ: 10 ವರ್ಷ ಪ್ರೀತಿಸಿ ಯುವತಿಗೆ ಕೈಕೊಟ್ಟ ಆರೋಪ: ಕಾನ್ಸ್ಟೇಬಲ್ ಬಂಧನ