ಅಲಪ್ಪುಳ (ಕೇರಳ): ಇತ್ತೀಚೆಗೆ ಅಲಪ್ಪುಳದ ಕರಾವಳಿ ಭಾಗದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ನಡೆಸಿದ ರ್‍ಯಾಲಿಯಲ್ಲಿ ವ್ಯಕ್ತಿಯ ಹೆಗಲ ಮೇಲೆ ಕುಳಿತಿದ್ದ ಬಾಲಕನೊಬ್ಬ ಹಿಂದೂ, ಕ್ರಿಶ್ಚಿಯನ್ ಧರ್ಮೀಯರ ವಿರುದ್ಧ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಕೇರಳ ಪೊಲೀಸರು ಎಫ್ಐಆರ್(ಪ್ರಥಮ ವರ್ತಮಾನ ಮಾಹಿತಿ) ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಐಪಿಸಿ ಸೆಕ್ಷನ್ 153 ಎ (ಧರ್ಮಗಳ ಮಧ್ಯೆ ವೈರತ್ವ, ದ್ವೇಷಕ್ಕೆ ಪ್ರಚೋದನೆ ನೀಡುವುದು) ಪ್ರಕಾರ ಕೇಸು ದಾಖಲಿಸಿಕೊಂಡಿದ್ದೇವೆ. ಈ ರ್‍ಯಾಲಿಯನ್ನು ಸಂಘಟಿಸಿದ ಆಯೋಜಕರು ಕೂಡಾ ಎಫ್‌ಐಆರ್‌ನ ಭಾಗವಾಗಿದ್ದಾರೆ. ಇದರ ಜೊತೆಗೆ, ಬಾಲಕ ಭಾಗವಹಿಸಿದ್ದ ಗುಂಪುನ ಮೇಲೂ ಕೇಸು ದಾಖಲಾಗುತ್ತದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
1. ವಿಡಿಯೋದಲ್ಲೇನಿದೆ? ಮೇ 21 ರಂದು ಅಲಪ್ಪುಳದಲ್ಲಿ ಪಿಎಫ್‌ಐ 'ಸೇವ್ ರಿಪಬ್ಲಿಕ್' ಎಂಬ ಬೃಹತ್ ರ್‍ಯಾಲಿ ಹಮ್ಮಿಕೊಂಡಿತ್ತು. ಈ ರ್‍ಯಾಲಿಯಲ್ಲಿ ವ್ಯಕ್ತಿಯೊಬ್ಬನ ಹೆಗಲ ಮೇಲೆ ಕುಳಿತ ಬಾಲಕ ಹಿಂದೂ ಮತ್ತು ಕ್ರಿಶ್ಮಿಯನ್ ಧರ್ಮೀಯರ ವಿರುದ್ಧ ಅತ್ಯಂತ ಪ್ರಚೋದನಾತ್ಮಕ ರೀತಿಯ ಘೋಷಣೆಗಳನ್ನು ಕೂಗಿದ್ದಾನೆ. ಆತ ಕೂಗಿದ ಘೋಷಣೆಯನ್ನು ರ್‍ಯಾಲಿಯಲ್ಲಿ ಸಾಗುತ್ತಿದ್ದ ಇತರೆ ಜನರು ಅನುಕರಿಸುತ್ತಾ ಮುನ್ನಡೆಯುತ್ತಿದ್ದರು. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಇದ್ದರೂ ಸುಮ್ಮನಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪ್ರಾಥಮಿಕ ತನಿಖೆ ಆರಂಭಿಸಿರುವುದಾಗಿ ಈ ಮೊದಲು ತಿಳಿಸಿದ್ದರು. ಬಾಲಕ ಅನ್ಯಧರ್ಮೀಯರ ವಿರುದ್ಧ ಕೂಗಿರುವ ಪ್ರಚೋದನಾತ್ಮಕ ಘೋಷಣೆಗೆ ಸಮಾಜದ ವಿವಿಧ ವಲಯಗಳಿಂದ ಭಾರಿ ಟೀಕೆ ಮಾತ್ರವಲ್ಲ, ಆತಂಕವೂ ವ್ಯಕ್ತವಾಗಿತ್ತು.
ಇದನ್ನೂ ಓದಿ: ಪಿಎಫ್ಐ-ಎಸ್‌ಡಿಪಿಐ ತೀವ್ರವಾದಿ ಸಂಘಟನೆಗಳು: ಕೇರಳ ಹೈಕೋರ್ಟ್
2. ಪಿಎಫ್‌ಐ ಪ್ರತಿಕ್ರಿಯೆ: ಈ ಬಗ್ಗೆ ಪಿಎಫ್‌ಐ ಸಂಘಟನೆ ತನ್ನ ಆಂತರಿಕ ಹೇಳಿಕೆ ಮೂಲಕ ಪ್ರತಿಕ್ರಿಯಿಸಿ, 'ಈ ರೀತಿಯ ಘೋಷಣೆಗಳು ಸಂಘಟನೆಯ ನೀತಿಗೆ ವಿರುದ್ಧವಾಗಿದೆ. ಈ ವಿಚಾರವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಅಲಪ್ಪುಳ ರ್‍ಯಾಲಿಯಲ್ಲಿ ಕೂಗುವ ಆಯ್ದ ಘೋಷಣೆಗಳಿಗೆ ನಾವು ಅನುಮೋದನೆ ನೀಡಿದ್ದೆವು. ಆರ್‌ಎಸ್‌ಎಸ್ ವಿರೋಧಿಸಿ ನಡೆದ ಈ ರ್‍ಯಾಲಿಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬಾಲಕ ಈ ರೀತಿ ಘೋಷಣೆ ಕೂಗಿರುವುದು ಈಗಷ್ಟೇ ನಮ್ಮ ಗಮನಕ್ಕೆ ಬಂದಿದೆ. ಈ ರೀತಿಯ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗುವುದು ಸಂಘಟನೆಯ ನೀತಿಯಲ್ಲ' ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಸಿ.ಎ.ರವೂಫ್ ಹೇಳಿದ್ದಾರೆ.
3. ಬಜರಂಗ ದಳ ರ್‍ಯಾಲಿ: ಅಲಪ್ಪುಳದಲ್ಲಿ ಪಿಎಫ್‌ಐ ರ್‍ಯಾಲಿ ನಡೆಯುವುದಕ್ಕೂ ಗಂಟೆಗಳಿಗೂ ಮುನ್ನ 'ಶೌರ್ಯ ರ್‍ಯಾಲಿ' ಎಂಬ ಹೆಸರಿನಲ್ಲಿ ಬಜರಂಗದಳ ಕಾರ್ಯಕರ್ತರು ರ್‍ಯಾಲಿ ನಡೆಸಿದ್ದರು. ಈ ಸಂದರ್ಭದಲ್ಲಿ, 'ದೇಶವಿರೋಧಿಗಳು ಮತ್ತು ಕೋಮುವಾದಿ/ಮತೀಯ ಗುಂಪುಗಳ ಕೈಗೆ ದೇಶವನ್ನು ಒಪ್ಪಿಸಲಾಗದು' ಎಂದು ಘೋಷಣೆಗಳನ್ನು ಕೂಗಿದ್ದರು ಎಂದು ತಿಳಿದುಬಂದಿದೆ.
4. ಅಲಪ್ಪುಳದಲ್ಲಿ ಸರಣಿ ಕೊಲೆ: ಕಳೆದ ವರ್ಷ ಇದೇ ಅಲಪ್ಪುಳದಲ್ಲಿ ಸರಣಿ ಕೊಲೆಗಳು ನಡೆದಿದ್ದು ದೇಶದ ಗಮನ ಸೆಳೆದಿತ್ತು. ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ(ಎಸ್‌ಡಿಪಿಐ- ಇದು ಪಿಎಫ್‌ಐನ ರಾಜಕೀಯ ವಿಭಾಗ) ರಾಜ್ಯ ಮುಖಂಡದ ಹತ್ಯೆ ನಡೆದಿತ್ತು. ಈ ಹತ್ಯೆ ನಡೆದು ಕೇವಲ 12 ಗಂಟೆಗಳ ಅವಧಿಯಲ್ಲೇ ಬಿಜೆಪಿ ರಾಜ್ಯ ಮಟ್ಟದ ನಾಯಕನ ಕೊಲೆ ಮಾಡಲಾಗಿತ್ತು.