ಕೊಚ್ಚಿ (ಕೇರಳ): ಜೈಲರ್ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ವಿನಾಯಕನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಸೃಷ್ಟಿಸಿದ ಆರೋಪದಡಿ ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಕೇರಳದ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿನಾಯಕನ್ ವಾಸವಿದ್ದ ಅಪಾರ್ಟ್‌ಮೆಂಟ್ ನಿವಾಸಿಗಳು ತಮಗೆ ತೊಂದರೆ ನೀಡುತ್ತಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ನಿನ್ನೆ ಸಂಜೆ ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಗೆ ಅವರನ್ನು ಕರೆಸಲಾಗಿತ್ತು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ವಿನಾಯಕನ್ ತಾಳ್ಮೆ ಕಳೆದುಕೊಂಡು ಪೊಲೀಸ್ ಠಾಣೆಯಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳು ನಟನನ್ನು ಬಂಧಿಸಿದ್ದಾರೆ. ಕಾನೂನಿನ ಪ್ರಕಾರ ಬಂಧನದ ಬಳಿಕ ನಟನನ್ನು ವೈದ್ಯಕೀಯ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವೈದ್ಯಕೀಯ ಪರೀಕ್ಷೆಯ ನಂತರ ಆಸ್ಪತ್ರೆಯಿಂದ ಪೊಲೀಸರೊಂದಿಗೆ ಹೊರಡುತ್ತಿದ್ದ ವಿನಾಯಕನ್ ಅವರನ್ನು ಪೊಲೀಸ್ ಠಾಣೆಗೆ ಬರಲು ಕಾರಣವೇನು ಎಂದು ಮಾಧ್ಯಮದವರು ಕೇಳಿದಾಗ, ತನ್ನನ್ನು ಏತಕ್ಕೆ ಬಂಧಿಸಲಾಗಿದೆ ಎಂದು ತಿಳಿದಿಲ್ಲ. ನಾನು ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದೆ. ಪೊಲೀಸರು ಏತಕ್ಕಾಗಿ ನನ್ನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಅವರನ್ನೆ ಕೇಳಿ ಎಂದು ವಿನಾಯಕನ್ ಹೇಳಿದರು.
ಇದೇ ವೇಳೆ ನಟನ ಜೊತೆಗಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಕುಡಿದ ಅಮಲಿನಲ್ಲಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಸೃಷ್ಟಿಸಿದ್ದರು. ಇದೇ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ್ದಾರೆ.
ಯಾರು ಈ ವಿನಾಯಕನ್: ವಿನಾಯಕನ್ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟ. ತಿಮಿರು ಮತ್ತು ಮಾರಿಯನ್ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಿತರಾದವರು ಈ ವಿನಾಯಕನ್. ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆ ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಹಲ್ಚಲ್ ಸೃಷ್ಟಿಸಿದ ಜೈಲರ್ ಸಿನಿಮಾದಲ್ಲಿ ನಟಿಸುವ ಎಲ್ಲ ಚಿತ್ರರಂಗದ ಗಮನ ಸೆಳೆದಿದ್ದಾರೆ ಈ ವಿನಾಯಕನ್. ವಿನಾಯಕನ್ ಅವರ ವಿಲ್ಲನ್ ಪಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ.
ನಟ ವಿನಾಯಕನ್ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಾರೆ. ಕಳೆದ ಆಗಸ್ಟ್ನಲ್ಲಿ ತೆರೆಕಂಡ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದಲ್ಲಿ ವಿನಾಯಕನ್ ಖಳನಾಯಕನಾಗಿ ನಟಿಸಿದ್ದರು. ವರ್ಮನ ಪಾತ್ರದಲ್ಲಿ ಮಿಂಚಿದ್ದರು. ವಿನಾಯಕನ್ ತಮಿಳಿನ ತಿಮಿರು, ಮರಿಯಾನ್ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಆಕಸ್ಮಿಕವಾಗಿ ಅಜಿತ್ ದೋವಲ್ ಭೇಟಿಯಾದ ಕಂಗನಾ ರಣಾವತ್