ತಿರುವನಂತಪುರಂ, ಕೇರಳ: ವಿವಾಹ ನೋಂದಣಿ ಮಾಡಿಕೊಳ್ಳುವ ವಧು-ವರರಿಗೆ ಕಡ್ಡಾಯವಾಗಿ ವಿವಾಹಪೂರ್ವ ಸಮಾಲೋಚನೆ ನಡೆಸಲು ಕೇರಳ ಮಹಿಳಾ ಆಯೋಗ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಭರವಸೆ ನೀಡಿದ್ದಾರೆ.
ವಿವಾಹಪೂರ್ವ ಸಮಾಲೋಚನೆ ಕಡ್ಡಾಯ ಮಾಡಲು ಕ್ರಮಕೈಗೊಳ್ಳಲಾಗುತ್ತದೆ. ಈ ಸಮಾಲೋಚನೆಯ ಪ್ರಮಾಣಪತ್ರವನ್ನು ವಿವಾಹ ನೋಂದಣಾಧಿಕಾರಿಗಳ ಮುಂದೆ ಹಾಜರುಪಡಿಸಿದ ನಂತರವೇ ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸತಿದೇವಿ ಹೇಳಿದ್ದಾರೆ.
ವಿವಾಹದ ನಂತರ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ಈ ಸಮಾಲೋಚನೆ ಸಹಕಾರಿಯಾಗಲಿದೆ. ಅದರಲ್ಲೂ ಕೇರಳದಲ್ಲಿ ಗೃಹಿಣಿಯರ ವಿರುದ್ಧದ ಹಿಂಸೆ ಹೆಚ್ಚಾಗುತ್ತಿದೆ. ಸಾಕಷ್ಟು ಮಂದಿ ಕೊಲೆಯಾಗಿದ್ದಾರೆ. ಇನ್ನೂ ಕೆಲವು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸತಿದೇವಿ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಕೇರಳದಲ್ಲಿ ನಡೆದ ಹಲವು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದವು. ಉತ್ರಾ ಪ್ರಕರಣದಲ್ಲಿ ಆಸ್ತಿಯನ್ನು ಕಸಿದುಕೊಳ್ಳಲು ವಿಷಪೂರಿತ ಹಾವನ್ನು ಬಳಸಿ ಆಕೆಯ ಪತಿಯೇ ಕೊಂದಿದ್ದನು. ವಿಸ್ಮಯ ಪ್ರಕರಣದಲ್ಲಿ ಪತಿಯ ಚಿತ್ರಹಿಂಸೆ ತಾಳಲಾರದೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಕೊನೆಗೂ ಜೈಲಿನಿಂದ ಹೊರ ಬಂದ ಶಾರುಖ್ ಪುತ್ರ ಆರ್ಯನ್ ಖಾನ್