ನವದೆಹಲಿ: ಯೆಮನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳ ನರ್ಸ್ ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಎಂಬುವರು ಯೆಮನ್‌ಗೆ ತೆರಳಲು ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. 2023ರ ಡಿಸೆಂಬರ್ 12ರಂದು ದೆಹಲಿ ಹೈಕೋರ್ಟ್ ಪ್ರೇಮಾ ಕುಮಾರಿ ಅವರಿಗೆ ಭಾರತೀಯ ಪ್ರಜೆಯೊಂದಿಗೆ ಯೆಮೆನ್‌ಗೆ ಹೋಗಲು ಅನುಮತಿ ನೀಡಿತ್ತು.
ಪ್ರೇಮಾ ಕುಮಾರಿ ಪರವಾಗಿ ಹೈಕೋರ್ಟ್ಗೆ ವಕೀಲ ಸುಭಾಷ್ ಚಂದ್ರನ್ ಅರ್ಜಿ ಸಲ್ಲಿಸಿದ್ದರು. ಯೆಮನ್‌ಗೆ ಹೋಗಲು ಅನುಮತಿ ನೀಡಿದ್ದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಪ್ರೇಮಾ ಕುಮಾರಿ ತಮ್ಮ ಸ್ವಂತ ಜವಾಬ್ದಾರಿಯ ಮೇಲೆ ಹೋಗಬೇಕು. ಕೇಂದ್ರ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರವು ಇದಕ್ಕೆ ಜವಾಬ್ದಾರರಾಗಿರುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಯೆಮನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚಿರುವ ಕಾರಣ ಪ್ರೇಮಕುಮಾರಿ ಯೆಮೆನ್‌ಗೆ ಹೋಗಲು ಅವಕಾಶ ನೀಡುವುದಿಲ್ಲ ಎಂದು ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಹೇಳಿತ್ತು. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಏನಾದರೂ ಅಹಿತಕರ ಘಟನೆ ನಡೆದರೆ ಸಹಾಯ ಮಾಡಲು ಆಗಲ್ಲ ಎಂದು ತಿಳಿಸಿತ್ತು.
ಕೊಲೆ ಪ್ರಕರಣದ ಅಪರಾಧಿ ಪ್ರೇಮಾ ಕುಮಾರಿ: ನಿಮಿಷಾ ಪ್ರಿಯಾ 2017ರಲ್ಲಿ ನಡೆದ ಯೆಮನ್ ಪ್ರಜೆ ತಲಾಲ್ ಅಬ್ದೋ ಮಹದಿ ಎಂಬಾತನ ಕೊಲೆ ಪ್ರಕರಣದ ಅಪರಾಧಿಯಾಗಿದ್ದಾರೆ. ಮಹದಿಗೆ ಅಮಲು ಪದಾರ್ಥ ನೀಡಿದ್ದು, ಮಿತಿ ಮೀರಿದ ಸೇವನೆಯಿಂದ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
2014ರಲ್ಲಿ ಯೆಮನ್ ರಾಜಧಾನಿ ಸನಾದಲ್ಲಿ ನಿಮಿಷಾ ಪ್ರಿಯಾ ತಮ್ಮ ಕ್ಲಿನಿಕ್ ಸ್ಥಾಪಿಸಲು ಮಹದಿ ಸಹಾಯ ಪಡೆದಿದ್ದರು. ಯೆಮನ್ ಕಾನೂನಿನ ಪ್ರಕಾರ, ಅಲ್ಲಿನ ನಾಗರಿಕರಿಗೆ ಮಾತ್ರ ಚಿಕಿತ್ಸಾಲಯಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಲು ಅನುಮತಿ ಇದೆ. ಇದರಿಂದಾಗಿ ಇಬ್ಬರೂ ಹತ್ತಿರವಾಗಿ ಕ್ಲಿನಿಕ್ ಶುರು ಮಾಡಿದ್ದರು. ಆದರೆ, ನಂತರ ಇಬ್ಬರ ಸಂಬಂಧ ಹದಗೆಟ್ಟಿತ್ತು.
ಇದರ ನಂತರ ಮಹದಿ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಅಲ್ಲದೇ, ಪಾಸ್‌ಪೋರ್ಟ್ ಪಡೆದುಕೊಂಡಿದ್ದ. ಹೀಗಾಗಿ ಮಹದಿಯ ಹಿಡಿತದಿಂದ ಪಾರಾಗಲು ನಿಮಿಷಾ ಯೆಮನ್ ನರ್ಸ್ ಜೊತೆ ಸೇರಿ ಪ್ಲಾನ್ ಮಾಡಿ ಅಮಲು ಚುಚ್ಚುಮದ್ದು ನೀಡಿದ್ದರು ಎಂದು ಹೇಳಲಾಗಿದೆ. 2023ರ ನವೆಂಬರ್ 13ರಂದು ಯೆಮನ್‌ನ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿಮಿಷಾ ಪ್ರಿಯಾಗೆ ಕೊನೆಯ ಅವಕಾಶವನ್ನು ನೀಡಿತ್ತು. ಇದೇ ವೇಳೆ, ಮೃತರ ಕುಟುಂಬದೊಂದಿಗೆ ರಾಜಿ ಮಾಡಿಕೊಳ್ಳುವಂತೆಯೂ ಅವರಿಗೂ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: ಕರ್ನಾಟಕದ ಮಹಿಳೆಯನ್ನು ಆಕೆಯ ಪೋಷಕರು ಬಂಧಿಸಿಟ್ಟಿರುವುದು ಕಾನೂನು ಬಾಹಿರ ಎಂದ ಸುಪ್ರೀಂ