ಆಲಪ್ಪುಳ (ಕೇರಳ): ಭಾರತೀಯ ಸಂವಿಧಾನದ ವಿರುದ್ಧ ವ್ಯತಿರಿಕ್ತ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ಕೇರಳದ ಮೀನುಗಾರಿಕೆ ಮತ್ತು ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಅಲಪ್ಪುಳದ ಮಲ್ಲಪಲ್ಲಿಯಲ್ಲಿ ನಡೆದ ಸಿಪಿಎಂ ಸಮಾರಂಭದಲ್ಲಿ ಮಾತನಾಡಿದ ಸಚಿವ ಸಾಜಿ ಚೆರಿಯನ್, ಭಾರತೀಯ ಸಂವಿಧಾನವು ಸಾರ್ವಜನಿಕರನ್ನು ಲೂಟಿ ಮಾಡಲು ಸಹಾಯ ಮಾಡುತ್ತಿದೆ ಎಂದಿದ್ದರು.
ಭಾರತೀಯ ಸಂವಿಧಾನದಲ್ಲಿ ಜಾತ್ಯತೀತತೆ, ಪ್ರಜಾಪ್ರಭುತ್ವದ ಬಗ್ಗೆ ಸಡಿಲವಾಗಿ ವಿವರಿಸಲಾಗಿದೆ. ಭಾರತೀಯ ಸಂವಿಧಾನವು ಕಾರ್ಮಿಕರ ಶೋಷಣೆಗೆ ಸಹಾಯ ಮಾಡಿದೆ ಮತ್ತು ದೇಶದಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ನೀಡುತ್ತಿಲ್ಲ ಎಂದು ಗಂಭೀರ ಮಾತುಗಳನ್ನಾಡಿದ್ದರು.
ಅವರ ಸಂವಿಧಾನದ ವಿರೋಧಿ ಹೇಳಿಕೆಯನ್ನು ಖಂಡಿಸಿ ಇಂದು ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್-ಯುಡಿಎಫ್ ಪ್ರತಿಭಟನೆ ನಡೆಸಿತು. ಸಚಿವ ಸಾಜಿ ಚೆರಿಯನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಯುಡಿಎಫ್ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ಹೀಗಾಗಿ ಇಂದಿನ ಸಂಪೂರ್ಣ ಕಲಾಪ ರದ್ದುಗೊಳಿಸಿದ ಸ್ಪೀಕರ್, ಕಲಾಪವನ್ನು ನಾಳೆಗೆ ಮುಂದೂಡಿದರು.
ಬ್ರಿಟಿಷರು ಸಿದ್ಧಪಡಿಸಿದ ಸಂವಿಧಾನವನ್ನು ಭಾರತೀಯರು ಬರೆದಿದ್ದಾರೆ ಮತ್ತು ಅದನ್ನು ಕಳೆದ 75 ವರ್ಷಗಳಿಂದ ಈ ದೇಶದಲ್ಲಿ ಜಾರಿಗೊಳಿಸಲಾಗಿದೆ. ಕಾರ್ಮಿಕರ ಹೋರಾಟಕ್ಕೂ ಮನ್ನಣೆ ನೀಡದ ದೇಶ ಭಾರತವಾಗಿದ್ದು, ಅದಕ್ಕೆ ಸಂವಿಧಾನವೇ ಕಾರಣ.
ಇದನ್ನೂ ಓದಿರಿ: ಸಂವಿಧಾನವು ಸಾರ್ವಜನಿಕರ ಲೂಟಿ ಮಾಡಲು ಸಹಾಯ ಮಾಡುತ್ತಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಕೇರಳ ಸಚಿವ
ಕಾರ್ಮಿಕರ ಶೋಷಣೆಗೆ ಒಪ್ಪುವ ಸಂವಿಧಾನ ಅಂಬಾನಿ, ಅದಾನಿಗಳ ಅಸಾಧಾರಣ ಬೆಳವಣಿಗೆಗೆ ಕಾರಣವಾಗಿದೆ. ಅಂತಹ ಉದ್ಯಮಿಗಳಿಗೆ ಸಂವಿಧಾನ ರಕ್ಷಣೆ ನೀಡಿದೆ. ಅವರ ವಿರುದ್ಧ ಎಷ್ಟು ಮಂದಿ ಪ್ರತಿಭಟನೆ ಮಾಡಬಹುದು? ಎಂದು ಸಜಿ ಚೆರಿಯನ್ ಪ್ರಶ್ನಿಸಿದ್ದರು.