ಕಾಸರಗೋಡ(ಕೇರಳ): ಅದೃಷ್ಟ ಯಾರನ್ನ ಯಾವಾಗ ಹೇಗೆ ಹುಡುಕಿಕೊಂಡು ಬರುತ್ತದೆ ಎಂಬುದು ಗೊತ್ತಾಗುವುದೇ ಇಲ್ಲ. ಅದಕ್ಕೆ ಉತ್ತಮ ಉದಾಹರಣೆಯೊಂದು ಕೇರಳದಲ್ಲಿ ನಡೆದಿದೆ. ಸಾಲದ ಸುಳಿಯಲ್ಲಿ ಸಿಲುಕಿ ಮನೆ ಮಾರಲು ಮುಂದಾಗಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಲಾಟರಿ ಹೊಡೆದಿದೆ. ಕೇರಳದ ಕಾಸರಗೋಡಿನ ಮೊಹಮ್ಮದ್ ಬಾವ(50) ಎಂಬಾತನಿಗೆ ಈ ಅದೃಷ್ಟ ಲಕ್ಷ್ಮಿ ಒಲಿದು ಬಂದಿದ್ದಾಳೆ. ಇದರಿಂದ ಪೇಂಟರ್ ಇದೀಗ ಇನ್ನೊಬ್ಬರಿಗೆ ಸಾಲ ಕೊಡುವಷ್ಟು ಶ್ರೀಮಂತನಾಗಿದ್ದಾನೆ.
ಕೇರಳದಲ್ಲಿ ಪೇಂಟರ್ ಆಗಿ ಕೆಲಸ ಮಾಡ್ತಿದ್ದ ಮೊಹಮ್ಮದ್ 8 ತಿಂಗಳ ಹಿಂದೆ ಹೊಸದಾಗಿ ಮನೆ ನಿರ್ಮಾಣ ಮಾಡಿದ್ದರು. ಆದರೆ, ವಿವಿಧ ಬ್ಯಾಂಕ್ಗಳಲ್ಲಿ ಮತ್ತು ವ್ಯಕ್ತಿಗಳಲ್ಲಿ ಹಣ ಪಡೆದುಕೊಂಡಿದ್ದರು. ಹೀಗಾಗಿ, ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಕಾರಣ ಮನೆ ಮಾರಾಟಕ್ಕೆ ಮುಂದಾಗಿದ್ದರು. ಹೀಗಾಗಿ, ಮಂಜೇಶ್ವರದಲ್ಲಿ ನಿರ್ಮಿಸಿದ್ದ ಮನೆ ಮಾರಾಟಕ್ಕಿಟ್ಟು, ಅದಕ್ಕೋಸ್ಕರ ಟೋಕನ್ ಹಣ ಸ್ವೀಕರಿಸಲು ಮುಂದಾಗಿದ್ದರು. ಇದಕ್ಕೆ ಕೇವಲ ಎರಡು ಗಂಟೆ ಬಾಕಿ ಇರುವಾಗಲೇ 1 ಕೋಟಿ ರೂಪಾಯಿ ಲಾಟರಿ ಹೊಡೆದಿದೆ.
ಇದನ್ನೂ ಓದಿರಿ: ₹100 ಲಾಟರಿ ಟಿಕೆಟ್ಗೆ ₹10 ಲಕ್ಷ ಬಂಪರ್.. ಪಂಜಾಬ್ ಬಾಲಕಿಗೆ ಒಲಿದ ಅದೃಷ್ಟ
ಕೇರಳ ಸರ್ಕಾರ ಅಧಿಕೃತವಾಗಿ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿ ಟಿಕೆಟ್ ಅನ್ನು ಮೊಹಮ್ಮದ್ ಖರೀದಿ ಮಾಡಿದ್ದರು. ಅದರ ಫಲಿತಾಂಶ ಇದೀಗ ಹೊರಬಿದ್ದಿದ್ದು ಮೊಹಮ್ಮದ್ ಬಾವ 1 ಕೋಟಿ ರೂಪಾಯಿ ಗೆದ್ದಿದ್ದಾರೆ. ಇದೀಗ ಎಲ್ಲ ತೆರಿಗೆ ನಂತರ 63 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು, ತಾವು ಮಾಡಿದ್ದ ಸಾಲ ತೀರಿಸಿದ್ದಾರೆ.
ಮೊಹಮ್ಮದ್ ಮನೆ ಕಟ್ಟಲು ಬ್ಯಾಂಕ್ನಿಂದ 10 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಜೊತೆಗೆ ಸಂಬಂಧಿಕರಿಂದ 20 ಲಕ್ಷ ರೂ ಕೈಸಾಲ ಪಡೆದುಕೊಂಡಿದ್ದರು. ಇದರ ಜೊತೆಗೆ ತಮ್ಮ ಎರಡನೇ ಮಗಳ ಮದುವೆಗೋಸ್ಕರ ಮತ್ತಷ್ಟು ಸಾಲ ಮಾಡಿದ್ದರು. ಇದೀಗ ಲಾಟರಿ ಬಹುಮಾನ ಗೆದ್ದಿರುವ ಕಾರಣ ಎಲ್ಲ ಸಾಲ ತೀರಿಸಿದ್ದಾರೆ.