ಕೊಲ್ಲಂ (ಕೇರಳ): ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳು ಅದಲು ಬದಲಾದ ಘಟನೆಗಳು ವರದಿಯಾಗಿದ್ದನ್ನು ನೋಡಿದ್ದೇವೆ. ಕೇರಳದಲ್ಲಿ ಏನಕೇನ ಮೃತದೇಹವನ್ನೇ ಬದಲಿಸಿದ ಪ್ರಸಂಗ ನಡೆದಿದೆ. ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸರಿಯಾದ ಶವವನ್ನು ನೀಡಲಾಗಿದೆ. ಆಸ್ಪತ್ರೆಯ ಅಚಾತುರ್ಯದ ಕುರಿತು ಆರೋಗ್ಯ ಇಲಾಖೆ ತನಿಖೆಗೂ ಸೂಚಿಸಿದೆ.
ಕೊಲ್ಲಂನ ಕಡಕ್ಕಲ್ ತಾಲೂಕು ಆಸ್ಪತ್ರೆಯಲ್ಲಿ ಶನಿವಾರ ಘಟನೆ ನಡೆದಿದೆ. ಅಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ವೃದ್ಧೆಯ ಮೃತದೇಹದ ಬದಲಿಗೆ ಮತ್ತೊಂದು ಶವವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಮನೆಗೆ ತೆರಳಿದ ಬಳಿಕ ಶವಸಂಸ್ಕಾರದ ವೇಳೆ ಶವ ಬದಲಾಗಿದ್ದು ಗೊತ್ತಾಗಿದೆ.
ಕಡಕ್ಕಲ್ ವಾಚಿಕೋಣಂ ಮೂಲದ ವೃದ್ಧ ವಾಮದೇವ (68) ಎಂಬಾತ ಅನಾರೋಗ್ಯದಿಂದ ನಿಧನರಾಗಿದ್ದರು. ಆಸ್ಪತ್ರೆ ಸಿಬ್ಬಂದಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ನೀಡಿದ್ದರು. ಈ ವೇಳೆ ಅದು ಬದಲಾಗಿ ರಾಜೇಂದ್ರನ್ ನೀಲಕಂದನ್ ಎಂಬಾತನ ಶವವನ್ನು ನೀಡಲಾಗಿತ್ತು. ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಮನೆಗೆ ತಂದಾಗ ವಾಮದೇವ ಅವರ ಸಂಬಂಧಿಕರು ಶವ ಕಂಡು ಅನುಮಾನಿಸಿದ್ದಾರೆ.
ಪರಿಶೀಲಿಸಿದ ಬಳಿಕ ಶವ ಬದಲಾಗಿದ್ದನ್ನು ಪತ್ತೆ ಮಾಡಿದ್ದಾರೆ. ತಕ್ಷಣವೇ ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಡಬಡಾಯಿಸಿದ ಸಿಬ್ಬಂದಿ ಆದ ಅಚಾತುರ್ಯವನ್ನು ಸರಿ ತಿದ್ದಿಕೊಂಡು ಸರಿಯಾದ ದೇಹವನ್ನು ವೃದ್ಧನ ಸಂಬಂಧಿಕರಿಗೆ ಹಸ್ತಾಂತರಿಸಿದರು. ಸರಿಯಾದ ಮೃತದೇಹದೊಂದಿಗೆ ಮನೆಗೆ ಮರಳಿ, ಅಂತ್ಯಕ್ರಿಯೆಯ ವಿಧಿಗಳನ್ನು ಮುಗಿಸಿದರು.
ವಿಚಾರಣೆಯ ವೇಳೆ, ಆಸ್ಪತ್ರೆಯ ಸಿಬ್ಬಂದಿ ಮೊದಲು ತಪ್ಪಾದ ದೇಹವನ್ನು ಸಂಬಂಧಿಕರಿಗೆ ತೋರಿಸಿದ್ದರು ಎಂದು ತಿಳಿದುಬಂದಿದೆ. ಬಹಳ ದಿನಗಳಿಂದ ಅನಾರೋಗ್ಯಪೀಡಿತ ವೃದ್ಧನಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದರಿಂದ ದೇಹ ಬದಲಾಗಿತ್ತು. ಸಂಬಂಧಿಕರೂ ಕೂಡ ಮೃತದೇಹವನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗದೆ ಸಿಬ್ಬಂದಿ ತೋರಿಸಿದ ಶವನನ್ನೇ ಪಡೆದಿದ್ದರು. ಆಸ್ಪತ್ರೆಯಲ್ಲಾದ ಘಟನೆಯ ಬಗ್ಗೆ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಈ ಬಗ್ಗೆ ವಿವರವಾದ ತನಿಖೆಯನ್ನು ನಡೆಸಲು ಸೂಚಿಸಿದೆ.
ಕೋವಿಡ್ ವೇಳೆ ಇಂಥದ್ದೇ ಅಚಾತುರ್ಯಗಳು..: ಇಂತಹ ಅಚಾತುರ್ಯಗಳು ಕೊರೊನಾ ಸೋಂಕು ಅತ್ಯಧಿಕವಾಗಿದ್ದ ವೇಳೆ ನಡೆದಿದ್ದವು. ಕರ್ನಾಟಕದ ಮಂಗಳೂರು, ಹಾವೇರಿ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಶವವನ್ನು ಅದಲು ಬದಲು ಮಾಡಿಕೊಟ್ಟಿದ್ದರು. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ನೇಶ್ವಿಗ್ರಾಮದ ಮಹಿಳೆಯ ಶವದ ಬದಲು ಆಲದಕಟ್ಟಿ ಗ್ರಾಮದಲ್ಲಿ ಮೃತಪಟ್ಟಿದ್ದ ಮಹಿಳೆಯ ಶವವನ್ನು ನೀಡಲಾಗಿತ್ತು. ಓರ್ವ ಮಹಿಳೆಯ ಮಗಳು ಮತ್ತು ಸಂಬಂಧಿಕರು ಶವದ ಮುಖ ನೋಡಿದಾಗ ಇದು ಬಯಲಾಗಿತ್ತು. ಮಾಡಿದ ತಪ್ಪು ಸರಿಪಡಿಸಿಕೊಳ್ಳಲು ಶವಾಗಾರದ ಸಿಬ್ಬಂದಿ ಧಪನ್ ಆಗಿದ್ದ ಶವವನ್ನು ಹೊರತೆಗೆದು ಮೂಲ ಕುಟುಂಬಸ್ಥರಿಗೆ ನೀಡಿದ್ದರು.
ಮಂಗಳೂರಿನಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಮುಕ್ಕದ ಶ್ರೀನಿವಾಸ ಆಸ್ಪತ್ರೆಯ ಶವಾಗಾರದಲ್ಲಿ ಸಿಬ್ಬಂದಿ ಎಡವಟ್ಟಿನಿಂದ ಶವ ಅದಲು ಬದಲಾಗಿತ್ತು. ಸುರತ್ಕಲ್ ರೀಜನ್ ಪಾರ್ಕ್ ನಿವಾಸಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಕುಟುಂಬಿಕರು ಶವವನ್ನು ಮನೆಗೆ ಕೊಂಡೊಯ್ದ ವೇಳೆ ಮೃತದೇಹ ಬದಲಾಗಿದ್ದು ಗೊತ್ತಾಗಿತ್ತು. ಬಳಿಕ ಎರಡು ಕಡೆಯ ಕುಟುಂಬದವರು ಮೃತದೇಹವನ್ನು ಆಸ್ಪತ್ರೆಗೆ ತಂದು ಪರಸ್ಪರ ಬದಲಾಯಿಸಿಕೊಂಡಿದ್ದಾರೆ. ಆಸ್ಪತ್ರೆ ಶವಾಗಾರದಲ್ಲಿದ್ದ ಸಿಬ್ಬಂದಿ ಸರಿಯಾಗಿ ಹೆಸರು ನೋಡದೇ ಮೃತದೇಹ ನೀಡಿರುವುದು ಈ ಅವಾಂತರಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಬಿಮ್ಸ್ ಆಸ್ಪತ್ರೆಯ ಮಹಾ ಎಡವಟ್ಟು... ಯಾರದ್ದೋ ಶವ ಇನ್ಯಾರಿಗೋ ಹಸ್ತಾಂತರ..!