ಕೋಯಿಕ್ಕೋಡ್ (ಕೇರಳ) : ಮಾರಕ ನಿಫಾ ವೈರಸ್ಗೆ ಇಬ್ಬರು ಮೃತಪಟ್ಟ ಬಳಿಕ ಆತಂಕದ ವಾತಾವರಣ ಉಂಟಾಗಿದ್ದು, ಸಾವನ್ನಪ್ಪಿದ ರೋಗಿಗಳ ಸಂಪರ್ಕಕ್ಕೆ ಬಂದ 124 ಆರೋಗ್ಯ ಕಾರ್ಯಕರ್ತರು ಸೇರಿದಂತೆ 702 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. ಜೊತೆಗೆ ಸೋಂಕು ತಡೆಗೆ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ತಂಡವನ್ನು ರಾಜ್ಯಕ್ಕೆ ಕರೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ನಿಕಟ ಸಂಪರ್ಕಕ್ಕೆ ಬಂದ ಇಬ್ಬರು ಆರೋಗ್ಯ ಕಾರ್ಯಕರ್ತರ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ವೈರಾಲಜಿ ಅಧ್ಯಯನ ಸಂಸ್ಥೆಗೆ ಕಳುಹಿಸಲಾಗಿದೆ. ಸಾವನ್ನಪ್ಪಿದ ರೋಗಿಗಳು ಈ ಮೊದಲು ಓಡಾಡಿದ ಜಾಗವನ್ನು ಗುರುತಿಸಲಾಗಿದೆ. ಅಲ್ಲಿ ಆ ವ್ಯಕ್ತಿಗಳ ಸಂಪರ್ಕಕ್ಕೆ ಬಂದವರಿಗೆ ಎಚ್ಚರಿಕೆ ನೀಡುವ ಮೂಲಕ ಕಾಳಜಿ ವಹಿಸಲು ಸೂಚಿಸಲಾಗಿದೆ.
ಇಬ್ಬರು ವ್ಯಕ್ತಿಗಳ ಸಂಪರ್ಕಕ್ಕೆ ಬಂದ ಜನರ ಸಂಖ್ಯೆ 350ಕ್ಕೆ ಏರಿಕೆಯಾಗಿದೆ. ಅಂಚೆ ಕಚೇರಿ, ಬ್ಯಾಂಕ್, ಸಾಮಾನ್ಯ ಅಂಗಡಿಗಳು ಕೂಡ ಇದರಲ್ಲಿವೆ. ಹೆಚ್ಚಿನ ಜನರು ಹೈ ರಿಸ್ಕ್ನಲ್ಲಿದ್ದಾರೆ ಎಂದು ಕೋಯಿಕ್ಕೋಡ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದರ ಜೊತೆಗೆ ಕಂಟೈನ್‌ಮೆಂಟ್ ಎಂದು ಗುರುತಿಸಲಾದ ವಲಯದ ಶಾಲೆಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸರ್ಕಾರ ಸೂಚನೆ ನೀಡಿದೆ.
ಕೇರಳಕ್ಕೆ ಪುಣೆ ಅಧ್ಯಯನ ತಂಡ: ರಾಜ್ಯದಲ್ಲಿ ಮಾರಣಾಂತಿಕ ನಿಫಾ ಸೋಂಕು ಹರಡುತ್ತಿರುವ ಬಗ್ಗೆ ಆತಂಕ ಉಂಟಾಗಿದ್ದು, ಪರೀಕ್ಷೆ ನಡೆಸಲು ಪುಣೆ ವೈರಾಲಜಿ ತಂಡವನ್ನು ಕರೆಸಲಾಗುತ್ತಿದೆ. ಜೊತೆಗೆ ಬಾವಲಿಗಳ ಸಮೀಕ್ಷೆ ನಡೆಸಲು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಮೊಬೈಲ್ ಲ್ಯಾಬ್ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಬುಧವಾರ ವಿಧಾನಸಭೆಗೆ ಮಾಹಿತಿ ನೀಡಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್, ವೈರಸ್ ಕಡಿಮೆ ಸಾಂಕ್ರಾಮಿಕವಾಗಿದ್ದರೂ ಸಾವಿಗೆ ಕಾರಣವಾಗುತ್ತಿದೆ ಎಂದು ಹೇಳಿದರು.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಿಫಾ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಮೊನೊಕ್ಲೋನಲ್ ಆಂಟಿಬಾಡಿಗಳನ್ನು ನೀಡಲು ಒಪ್ಪಿಕೊಂಡಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ಜನರ ಮೇಲೆ ಕಣ್ಗಾವಲು, ಸಂಪರ್ಕ ಪತ್ತೆಹಚ್ಚುವಿಕೆ, ಕಡಿಮೆ ಮತ್ತು ಹೆಚ್ಚಿನ ಅಪಾಯ ಎಂದು ವರ್ಗೀಕರಿಸುವುದು, ಅವರಿಗೆ ಪ್ರತ್ಯೇಕ ಸೌಲಭ್ಯಗಳನ್ನು ಸ್ಥಾಪಿಸುವುದು, ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸುವುದು ಮತ್ತು ಸೋಂಕಿತರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಕುರಿತು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.
ಒಡಿಶಾದಲ್ಲಿ ಕೀಟ ಕಡಿತದಿಂದ 5 ಸಾವು: ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ವಿಷಕಾರಿ ಕೀಟಗಳ ಕಡಿತದಿಂದ 5 ಮಂದಿ ಸಾವನ್ನಪ್ಪಿದ್ದು, ಈ ಕೀಟಗಳು ಕಣ್ಣಿಗೂ ಕಾಣಿಸದೇ ಕಚ್ಚಿದ 15 ದಿನಗಳ ಬಳಿಕ ಮನುಷ್ಯರು ಸಾವಿಗೀಡಾಗುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ಆರೋಗ್ಯ ಇಲಾಖೆ ಈ ಬಗ್ಗೆ ಆರಂಕ ಬೇಡ, ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದೆ.
ಸ್ಕ್ರಬ್ ಟೈಫಸ್ ಎಂಬ ಕೀಟದ ಕಡಿತದಿಂದ ಈ ಮಾರಣಾಂತಿಕ ಕಾಯಿಲೆ ಬರುತ್ತಿದೆ. ಸಕಾಲದಲ್ಲಿ ರೋಗ ಪತ್ತೆ ಮಾಡಿ ಚಿಕಿತ್ಸೆ ಪಡೆದುಕೊಳ್ಳಿ. ಸೂಕ್ತ ಔಷಧವನ್ನು ಸೇವಿಸಿ 14 ದಿನಗಳಲ್ಲಿ ಈ ಕಾಯಿಲೆಯಿಂದ ಚೇತರಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ಸ್ಕ್ರಬ್ ಟೈಫಸ್ ಕೀಟವು ಜಲ, ಉದ್ಯಾನಗಳು, ಮನೆ ಛಾವಣಿಗಳನ್ನು ಆವರಿಸುವ ವ್ಯರ್ಥ ಮರಗಳು, ಪೊದೆಗಳಲ್ಲಿ ಕಂಡುಬರುತ್ತದೆ. ಹೀಗಾಗಿ ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕೆಲಸ ಮಾಡುವ ಕಾರ್ಮಿಕರು ತುಂಬು ಬಟ್ಟೆಯನ್ನು ಧರಿಸಿ ಎಂದು ಸಲಹೆ ನೀಡಲಾಗಿದೆ.
ಇದನ್ನೂ ಓದಿ: Nipah virus: ಕೇರಳದಲ್ಲಿ ನಿಫಾ ವೈರಸ್ನಿಂದ ಇಬ್ಬರು ಸಾವು.. ಖಚಿತ ಪಡಿಸಿದ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ