ಎರ್ನಾಕುಲಂ (ಕೇರಳ): ಮುಸ್ಲಿಂ ಮಹಿಳೆ ತನ್ನ ಗಂಡನ ಅನುಮತಿಯಿಲ್ಲದೆ ವಿಚ್ಛೇದನ ಪಡೆಯಬಹುದು ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ. ಇಸ್ಲಾಮಿಕ್ ಕಾನೂನಾದ ಖುಲ್ಲಾ ಪ್ರಕಾರ ಮುಸ್ಲಿಂ ಮಹಿಳೆಯರು ವಿಚ್ಛೇದನವನ್ನು ಪಡೆಯಬಹುದು. ಇದನ್ನು ಇಸ್ಲಾಮಿಕ್ ಕಾನೂನು ಒಪ್ಪುತ್ತದೆ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಮತ್ತು ಸಿ ಎಸ್ ಡಯಾಸ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು, ಮುಸ್ಲಿಂ ಮಹಿಳೆ ವಿಚ್ಛೇದನ ಪಡೆಯಲು ಪತಿಯ ಅನುಮತಿ ಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇಸ್ಲಾಮಿಕ್ ಕಾನೂನಾದ ಖುಲ್ಲಾ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನ ನೀಡಲು ಅವಕಾಶ ನೀಡಿರುವ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತ್ತು.
ಮುಸ್ಲಿಂ ಮಹಿಳೆಯರು ವಿಚ್ಛೇದನ ಬಯಸಿದಲ್ಲಿ ಪತಿಯಿಂದ ತಲಾಖ್ ಕೇಳಬೇಕು. ಖುಲ್ಲಾದಂತಹ ಇಸ್ಲಾಮಿಕ್ ಕಾನೂನುಗಳು ಏಕಪಕ್ಷೀಯವಾಗಿ ಪತಿಗೆ ವಿಚ್ಛೇದನ ನೀಡುವ ಅಧಿಕಾರವನ್ನು ಮಹಿಳೆಯರಿಗೆ ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಅರ್ಜಿದಾರರು ಮಹಿಳೆ ತನ್ನ ಗಂಡನ ಅನುಮತಿಯೊಂದಿಗೆ ಮಾತ್ರ ವಿಚ್ಛೇದನವನ್ನು ಪಡೆಯಬಹುದು ಎಂದು ವಾದಿಸಿದ್ದರು.
ಇದನ್ನೂ ಓದಿ: ಸ್ವಂತ ಮಕ್ಕಳನ್ನೂ ಉಗ್ರರನ್ನಾಗಿಸಿದ್ದ ಐಸಿಸ್ ಭಯೋತ್ಪಾದಕಿಗೆ 20 ವರ್ಷ ಜೈಲು
ಆದರೆ, ಇಸ್ಲಾಂ ಧರ್ಮ ಮಹಿಳೆಯರಿಗೆ ನೀಡಿರುವ ವಿಚ್ಛೇದನ ವಿಧಾನದ ಪ್ರಕಾರ, ಆಕೆ ಗಂಡನ ಒಪ್ಪಿಗೆಯನ್ನು ಪಡೆಯುವ ಅವಶ್ಯಕತೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಶರಿಯತ್ ಕಾನೂನು ಖುಲಾ ಪ್ರಕಾರ, ಮಹಿಳೆ ವಿಚ್ಛೇದನವನ್ನು ಪಡೆಯಬಹುದು. ಮದುವೆಯ ಸಮಯದಲ್ಲಿ ಸ್ವೀಕರಿಸಿದ ಉಡುಗೊರೆಗಳನ್ನು ಹಿಂದಿರುಗಿಸುವ ಇಚ್ಛೆಯನ್ನು ಹೊಂದಿದ್ದರೇ, ಹಿಂದಿರುಗಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಖುಲ್ಲಾ ಪ್ರಕಾರ, ವಿಚ್ಛೇದನ ಪಡೆಯುವ ಮೊದಲು ಹೊಂದಾಣಿಕೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಇದು ವಿಫಲವಾದ್ರೆ ಮಹಿಳೆ ಖುಲ್ಲಾ ಕಾನೂನಿನ ಮೂಲಕ ವಿಚ್ಛೇದನ ಪಡೆಯಬಹುದು ಎಂದು ಕೋರ್ಟ್ ತೀರ್ಪು ನೀಡಿದೆ.