ತಿರುವನಂತಪುರಂ(ಕೇರಳ): ಸರ್ಕಾರಿ ನೌಕರರು ವೈಯಕ್ತಿಕ ಯೂಟ್ಯೂಬ್ ಚಾನಲ್ ಆರಂಭಿಸುವಂತಿಲ್ಲ ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಸೇವಾ ನಿಯಮ ಉಲ್ಲಂಘನೆಯ ಆಧಾರದಲ್ಲಿ ಸರ್ಕಾರ ಈ ಆದೇಶ ಜಾರಿಗೊಳಿಸಿದೆ. ಯೂಟ್ಯೂಬ್ ಚಾನಲ್‌ಗಳಿಂದ ಸರ್ಕಾರಿ ಹೆಚ್ಚುವರಿ ಆದಾಯ ಗಳಿಸುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಈ ನಿಯಮ ಜಾರಿ ಮಾಡಿದೆ. ಫೆಬ್ರವರಿ 3 ರಂದು ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರಕಾರ, ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸುವುದು ಕೇರಳ ಸರ್ಕಾರಿ ನೌಕರರ ನಡವಳಿಕೆ ನಿಯಮಗಳು, 1960 ರ ಉಲ್ಲಂಘನೆಯಾಗಿದೆ. YouTube ಚಾನಲ್‌ಗಳನ್ನು ಪ್ರಾರಂಭಿಸಲು ಪ್ರಸ್ತುತ ನಿಯಮಗಳಡಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಕಲಾತ್ಮಕ ಕೆಲಸವನ್ನು ಪೋಸ್ಟ್ ಮಾಡಲು ಅನುಮತಿ ಕೋರಿ ಅಗ್ನಿಶಾಮಕ ರಕ್ಷಣಾ ಸೇವೆ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಆದೇಶ ಬಂದಿದೆ. ಅಗ್ನಿಶಾಮಕ ರಕ್ಷಣಾ ಸೇವೆಗೆ ಅನುಮತಿ ನಿರಾಕರಿಸಿ ಆದೇಶ ಹೊರಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಯೂಟ್ಯೂಬ್ ಚಾನಲ್‌ಗಳ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. 12 ತಿಂಗಳುಗಳಲ್ಲಿ ಕನಿಷ್ಠ 1,000 ಜನರು ವ್ಯಕ್ತಿಯೊಬ್ಬನ ಯೂಟ್ಯೂಬ್ ಚಾನಲ್‌ಗೆ ಚಂದಾದಾರರಾಗಿದ್ದರೆ ಮತ್ತು ಅದನ್ನು 4,000 ಗಂಟೆಗಳ ಕಾಲ ವೀಕ್ಷಿಸಿದರೆ, ಚಾನಲ್ ಅನ್ನು ನಡೆಸುವ ವ್ಯಕ್ತಿ ಹಣ ಗಳಿಸಲು ಅರ್ಹನಾಗುತ್ತಾನೆ.
ಕೇರಳ ಸರ್ಕಾರದ ಪ್ರಕಾರ, ಹೀಗೆ ಯೂಟ್ಯೂಬ್ನಿಂದ ಹಣ ಗಳಿಸುವುದು ಸರ್ಕಾರಿ ನೌಕರರ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಉದ್ಯೋಗಿಗಳಿಗೆ ಸ್ವಂತ ಯೂಟ್ಯೂಬ್ ಚಾನಲ್ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ತಪ್ಪು ಸುದ್ದಿ ಹರಡುವ ಸಾಮಾಜಿಕ ಮಾಧ್ಯಮಗಳ ಮೇಲೆ ಕಡಿವಾಣ ಹಾಕುವ ಪ್ರಯತ್ನದಲ್ಲಿ ಕೇಂದ್ರವು ಈಗ ಒಟ್ಟು 110 ಯೂಟ್ಯೂಬ್ ಚಾನಲ್‌ಗಳ ಮೇಲೆ ನಿಷೇಧ ವಿಧಿಸಿದೆ. ಇದರಲ್ಲಿ ಆರು ಚಾನಲ್‌ಗಳನ್ನು ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿ ಪ್ರಸಾರ ಮಾಡಿದ್ದಕ್ಕಾಗಿ ಕಳೆದ ತಿಂಗಳು ನಿಷೇಧಿಸಲಾಗಿದೆ. ಇದರೊಂದಿಗೆ 45 ವಿಡಿಯೋಗಳು, ನಾಲ್ಕು ಫೇಸ್‌ಬುಕ್ ಖಾತೆಗಳು, ಮೂರು ಇನ್‌ಸ್ಟಾಗ್ರಾಮ್ ಖಾತೆಗಳು, ಐದು ಟ್ವಿಟರ್ ಹ್ಯಾಂಡಲ್‌ಗಳು ಮತ್ತು ಆರು ವೆಬ್‌ಸೈಟ್‌ಗಳನ್ನು ಸಹ ನಿಷೇಧಿಸಲಾಗಿದೆ.
ಯೂಟ್ಯೂಬ್ ಮುಖ್ಯಸ್ಥರ ಬದಲಾವಣೆ: ಯೂಟ್ಯೂಬ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಸಾನ್ ವೊಜ್ಸಿಕಿ ಸುಮಾರು ಒಂದು ದಶಕದ ನಂತರ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ವೊಜ್ಸಿಕಿ ಸಿಲಿಕಾನ್ ವ್ಯಾಲಿಯ ಪ್ರಮುಖ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. 1998 ರಲ್ಲಿ ಯೂಟ್ಯೂಬ್ ಆರಂಭವಾದಾಗಿನಿಂದಲೂ ಅವರು ಗೂಗಲ್ನ ಭಾಗವಾಗಿದ್ದಾರೆ. 2006 ರಲ್ಲಿ ವಿಶ್ವದ ಪ್ರಮುಖ ಮನರಂಜನಾ ವೇದಿಕೆಗಳಲ್ಲಿ ಒಂದಾದ ಯೂಟ್ಯೂಬ್ ಅನ್ನು ಗೂಗಲ್ ಸ್ವಾಧೀನಪಡಿಸಿಕೊಂಡಿತು. ತನ್ನ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಲು ಮತ್ತು ತನ್ನ ಆರೋಗ್ಯ ಮತ್ತು ವೈಯಕ್ತಿಕ ವಿಷಯಗಳತ್ತ ಹೆಚ್ಚು ಗಮನಹರಿಸಲು ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಅವರು ಯೂಟ್ಯೂಬ್‌ನ ಕಾರ್ಪೊರೇಟ್ ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಯೂಟ್ಯೂಬ್‌ನ ಉತ್ಪನ್ನ ವಿಭಾಗದ ಮುಖ್ಯಸ್ಥರಾದ ನೀಲ್ ಮೋಹನ್ ಇವರ ಸ್ಥಾನಕ್ಕೆ ಬರಲಿದ್ದಾರೆ.
ಇದನ್ನೂ ಓದಿ: ತಾಳೆ ಹಣ್ಣು ತಿಂದರೆ ಸ್ತನಗಳು ದೊಡ್ಡದಾಗುತ್ತವೆ ಎಂದ ಯೂಟ್ಯೂಬ್ ವೈದ್ಯೆಗೆ ಸಂಕಷ್ಟ