ತಿರುವನಂತಪುರಂ(ಕೇರಳ): ಬಹು ವಿವಾದಿತ ಅಕ್ರಮ ಚಿನ್ನ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ಗೆ ಕೇರಳ ಹೈಕೋರ್ಟ್ ಜಾಮೀನು ನೀಡಿದೆ.
ಸ್ವಪ್ನಾ ಸುರೇಶ್ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (Unlawful Activities Prevention Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.
25 ಲಕ್ಷ ರೂಪಾಯಿಯ ಬಾಂಡ್ ಮತ್ತು ಇಬ್ಬರ ಶ್ಯೂರಿಟಿಯೊಂದಿಗೆ ಸ್ವಪ್ನಾ ಸುರೇಶ್ ಅವರಿಗೆ ಜಾಮೀನು ನೀಡಲಾಗಿದೆ. ಈ ಮೂಲಕ ಕೇರಳ ರಾಜ್ಯಾದ್ಯಂತ ಸಾಕಷ್ಟು ರಾಜಕೀಯ ವಿಪ್ಲವಗಳಿಗೆ ಕಾರಣವಾಗಿದ್ದ ಪ್ರಕರಣವೊಂದರ ಆರೋಪಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಸ್ವಪ್ನಾ ಸುರೇಶ್ ಜೊತೆಗೆ ಸರಿತ್ ಪಿ.ಎಸ್, ಮೊಹಮದ್ ಶಫಿ ಪಿ, ಜಲಾಲ್ ಎ.ಎಂ, ರಾಬಿನ್ಸ್ ಹಮೀದ್, ರಮೀಸ್ ಕೆ.ಟಿ, ಶರಾಫುದ್ದೀನ್ ಕೆ.ಟಿ, ಮೊಹಮದ್ ಅಲಿ ಎಂಬ ಏಳು ಮಂದಿಗೂ ಜಾಮೀನು ನೀಡಿ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಇವರೆಲ್ಲರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಕೇಸು ದಾಖಲಿಸಿಕೊಂಡಿತ್ತು.
ಈ ಏಳು ಮಂದಿಯಲ್ಲಿ ಮೊಹಮದ್ ಶಫಿ ಪಿ, ರಾಬಿನ್ಸ್ ಹಮೀದ್,ರಮೀಸ್ ಕೆ.ಟಿ ಅವರ ವಿರುದ್ಧ ವಿದೇಶಿ ವಿನಿಮಯದ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (COFEPOSA) ಅಡಿ ದೂರು ದಾಖಲಾಗಿದ್ದು, ಅವರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಉಳಿದವರು ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇದಕ್ಕೂ ಮೊದಲು ಕಸ್ಟಮ್ ವಿಭಾಗ ದಾಖಲಿಸಿದ್ದ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ಗೆ ಜಾಮೀನು ದೊರೆತಿತ್ತು. ಆರ್ಥಿಕ ಅಪರಾಧ ಪ್ರಕರಣ ದಾಖಲಿಸಿದ್ದ ಕಸ್ಟಮ್ಸ್ ಪೊಲೀಸರು 60 ದಿನಗಳಾದರೂ ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಕೊಚ್ಚಿಯ ಎಸಿಜೆಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣ: ಕಸ್ಟಮ್ ಕೇಸ್ನಲ್ಲಿ ಸ್ವಪ್ನಾ ಸುರೇಶ್ಗೆ ಜಾಮೀನು