ದಿಂಡಿಗಲ್(ತಮಿಳುನಾಡು): ಜಿಲ್ಲೆಯ ಪಳನಿ ದೇವಾಲಯಕ್ಕೆ ಭೇಟಿ ನೀಡಿದ್ದ ಕೇರಳ ಮೂಲದ ದಂಪತಿ ಖಾಸಗಿ ಹೋಟೆಲ್ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ರಘುರಾಮ್(46) ಮತ್ತು ಉಷಾ(44) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ.
ಕೇರಳದ ಎರ್ನಾಕುಲಂ ಜಿಲ್ಲೆಯ ಪಲ್ಲುರ್ತಿಯವರಾದ ರಘುರಾಮ್ ಮತ್ತು ಉಷಾ ನ.21 ರಂದು ಪಳನಿ ದೇವಸ್ಥಾನಕ್ಕೆ ಬಂದಿದ್ದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಸಹ ಇದ್ದಾರೆ. ಹೋಟೆಲ್ನಲ್ಲಿ ತಂಗಿದ್ದ ಈ ದಂಪತಿ ನ.22 ರಂದು ರೂಮಿನ ಬಾಗಿಲು ತೆರೆಯದ ಹಿನ್ನೆಲೆ ಹೋಟೆಲ್ನವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲನ್ನು ಒಡೆದು ನೋಡಿದಾಗ ದಂಪತಿ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಗೊತ್ತಾಗಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಳನಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಮೂರು ಪಕ್ಷಗಳ ಮುಖಂಡರ ವಿರುದ್ಧ ಆರೋಪ: ಪತ್ತೆಯಾಗಿರುವ ಡೆತ್ನೋಟ್ನಲ್ಲಿ 'ಕಾಂಗ್ರೆಸ್ , ಬಿಜೆಪಿ ಮತ್ತು ಸಿಪಿಎಂ ಪಕ್ಷದ 10 ಜನ ಮುಖಂಡರು ಕ್ಷುಲ್ಲಕ ಕಾರಣಕ್ಕೆ ತಮ್ಮನ್ನು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದರು. ಇದರಿಂದ ನಾವು ತುಂಬಾ ನೊಂದಿದ್ದೇವೆ. ನಮ್ಮ ಸಾವಿಗೆ ಈ 10 ಜನ ಮುಖಂಡರೇ ಕಾರಣ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು' ಎಂದು ದಂಪತಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.