ತಿರುವನಂತಪುರಂ (ಕೇರಳ): ಪರವಾನಗಿ ಇಲ್ಲದ ಬಂದೂಕು ಹೊಂದಿದ್ದ ಆರೋಪದಡಿ ಜಮ್ಮುಕಾಶ್ಮೀರದ ಐವರನ್ನು ತಿರುವನಂತಪುರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಎಟಿಎಂಗೆ ಹಣ ತುಂಬುವ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಬಂಧಿತರನ್ನು ಶೌಕತ್ ಅಲಿ, ಶಕುರ್ ಅಹಮದ್, ಗುಲ್ಸಮನ್, ಮುಷ್ತಾಕ್ ಹುಸೇನ್ ಮತ್ತು ಮೊಹಮೆಮ್ ಜಾವೇದ್ ಎಂದು ಗುರುತಿಸಲಾಗಿದೆ. ಎಟಿಎಂ ಕ್ಯಾಶ್ ಫಿಲ್ಲಿಂಗ್ ಏಜೆನ್ಸಿಗೆ ಮಹಾರಾಷ್ಟ್ರದ ಏಜೆನ್ಸಿಯೊಂದರಿಂದ ನೇಮಕಾತಿಯಾದ ನಂತರ ಅವರು ಕಳೆದ ಒಂದು ವರ್ಷದಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹೊಂದಿದ್ದ ಡಬಲ್ ಬ್ಯಾರೆಲ್ ಗನ್‌ಗೆ ಪರವಾನಗಿ ಇಲ್ಲದ್ದರ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಐದು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ತಿರುವನಂತಪುರಂನ ಪೊಲೀಸರು ಕಾಶ್ಮೀರ ರಜೌರಿಯ ಎಡಿಎಂ ಅನ್ನು ಸಂಪರ್ಕಿಸಿ, ಆರೋಪಿಗಳ ಬಗ್ಗೆ ಮಾಹಿತಿ ಪಡೆದರು. ಆರೋಪಿಗಳು ಹೊಂದಿರುವ ಬಂದೂಕುಗಳಿಗೆ ಯಾವುದೇ ಪರವಾನಗಿ ಪಡೆದಿಲ್ಲ ಎಂದು ಮಾಹಿತಿ ಖಚಿತವಾದ ಬಳಿಕ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಚಾಕುವಿನಿಂದ ಹಲ್ಲೆ... ಆಸ್ಪತ್ರೆಗೆ ದಾಖಲು!
ಆರೋಪಿಗಳ ಪ್ರಕಾರ, ಗನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಮಹಾರಾಷ್ಟ್ರದ ನೇಮಕಾತಿ ಸಂಸ್ಥೆ ಒದಗಿಸಿದೆ ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.