ಮಲಪ್ಪುರಂ (ಕೇರಳ): ಕೇರಳದ ತನೂರ್ ತುವಲ್ ಕರಾವಳಿಯಲ್ಲಿ ಪ್ರವಾಸಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ 22 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇದರಲ್ಲಿ ಒಂದೇ ಕುಟುಂಬದ 11 ಮಂದಿ ಸೇರಿದ್ದಾರೆ. ದುರಂತದಲ್ಲಿ ತಾನೂರ್ ಕುನುಮ್ಮಲ್ ಜಾಬೀರ್ ಕುಟುಂಬದ 11 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಎಂಟು ತಿಂಗಳ ಮಗುವೂ ಸೇರಿದೆ. ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ತಾನೂರು, ಪರಪ್ಪನಂಗಡಿ ಮತ್ತು ಚೆಟ್ಟಿಪಾಡಿ ಮೂಲದವರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ತಾನೂರ್ ಕುನ್ನುಮ್ಮಲ್ ಜಾಬೀರ್ ಅವರ ಪತ್ನಿ ಜಲ್ಸಿಯಾ ಅಲಿಯಾಸ್ ಕುಂಞಿಮ್ಮು (42), ಮಗ ಜರೀರ್ (12) ಮಗಳು ಜನ್ನಾ, ಸೈತಲವಿ ಅವರ ಪತ್ನಿ ಸೀನತ್ (43), ಮಕ್ಕಳಾದ ಅಸ್ನಾ (18), ಶಮ್ನಾ (16), ಸಫ್ಲಾ (13) ಮತ್ತು ಫಿದಾ ದಿಲ್ನಾ ಸಹೋದರಿ ನುಸ್ರತ್ (35), ಮಗಳು ಆಯೇಷಾ ಮೆಹ್ರೀನ್, ಜಾಬೀರ್ ಸಹೋದರ ಸಿರಾಜ್ ಅವರ ಪತ್ನಿ ರಜಿನಾ (27), ಶಹರಾ, ಫಾತಿಮಾ ರಿಷಿದಾ ಮತ್ತು ನೈರಾ ಫಾತಿಮಾ (ಎಂಟು ತಿಂಗಳು). ಮೃತರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ. ಮೃತ ಪೊಲೀಸ್ ಅಧಿಕಾರಿ ಜಬರುದ್ದೀನ್ (38) ಎಂದು ಗುರುತಿಸಲಾಗಿದೆ.
ಹಬ್ಬದ ನಿಮಿತ್ತ ಮತ್ತು ಶಾಲೆಯ ರಜೆ ಹಿನ್ನೆಲೆಯಲ್ಲಿ ತಾನೂರ್ ಕುನ್ನುಮ್ಮಲ್ ಸೈತಲವಿ ಅವರ ಕುಟುಂಬದ ಮನೆಯಲ್ಲಿ ಕುನುಮ್ಮಲ್ ಜಬೀರ್ ಮತ್ತು ಕುನುಮ್ಮಲ್ ಸಿರಾಜ್ ಸಹೋದರರ ಪತ್ನಿಯರು, ಮಕ್ಕಳು ಮತ್ತು ಸಹೋದರಿಯರು ತೆರಳಿದ್ದರು. ಮಕ್ಕಳ ಒತ್ತಾಯದ ಮೇರೆಗೆ ಟುವಾಲ್ತೀರಾಕ್ಕೆ ಹೋಗಲು ನಿರ್ಧರಿಸಲಾಗಿತ್ತು. ಯಾವುದೇ ಸಂದರ್ಭದಲ್ಲೂ ದೋಣಿ ಹತ್ತಬೇಡಿ ಎಂದು ಹೇಳಿ ಸೈತಲವಿ ಅಲ್ಲಿಂದ ನಿರ್ಗಮಿಸಿದ್ದರು. ಮನೆಗೆ ಹಿಂತಿರುಗಿ ಅವರು ಪತ್ನಿಗೆ ಕರೆ ಮಾಡಿದಾಗ ಕಿರುಚಾಟ ಶಬ್ದ ಕೇಳಿಸಿದೆ. ಕೂಡಲೇ ಅವರು ಘಟನಾ ಸ್ಥಳಕ್ಕೆ ಧಾವಿಸಿ ತಮ್ಮ ಪ್ರೀತಿಪಾತ್ರರ ವಾಪಸ್ ಬರುವಿಕೆಗೆ ಕಾಯುತ್ತಿದ್ದರು. ಆದ್ರೆ ಈ ದುರಂತದಿಂದ ಅವರ ಕುಟುಂಬದಲ್ಲಿ ಮೌನ ಆವರಿಸಿದೆ. ಈಗ ತಾಯಿ, ಮೂವರು ಪುತ್ರರು ಮತ್ತು ಗಾಯಗೊಂಡ ಸಹೋದರಿ ಮತ್ತು ಅವರ ಮಕ್ಕಳು ಸೇರಿದಂತೆ ಕುಟುಂಬದಲ್ಲಿ ಕೇವಲ ಎಂಟು ಜನರು ಬದುಕುಳಿದಿದ್ದಾರೆ.
ಇನ್ನು ಮೃತದೇಹಗಳಿದ್ದರೆ ಆತಂಕ: ಬೋಟ್ ಪಲ್ಟಿಯಾದ ಜೌಗು ಪ್ರದೇಶದಲ್ಲಿ ಇನ್ನೂ ಮೃತದೇಹಗಳಿರುವುದು ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ನದಿ ಸಮುದ್ರ ಸೇರುವ ಭಾಗದಲ್ಲಿ ಮಣ್ಣು, ಮರಳು, ಕೆಸರು ಇರುವ ಸಾಧ್ಯತೆ ಇದ್ದು, ಹೆಚ್ಚಿನ ಶೋಧದ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದೋಣಿಯಲ್ಲಿ 40 ಮಂದಿ ಇದ್ದರು ಎಂಬುದು ಪ್ರಾಥಮಿಕ ತನಿಖೆ ಮೂಲಕ ತಿಳಿದುಬಂದಿದೆ.
ಅಪಘಾತಕ್ಕೀಡಾದ ಡಬಲ್ ಡೆಕ್ಕರ್ ಬೋಟ್ ಸಂಪೂರ್ಣವಾಗಿ ಪತ್ತೆಯಾಗಿದೆ. ಜೆಸಿಬಿ ಸಹಾಯದಿಂದ ದೋಣಿಯನ್ನು ಇನ್ನೊಂದು ಬದಿಗೆ ತರಲಾಗಿದೆ. ದಡದಿಂದ ಅರ್ಧ ಕಿಲೋಮೀಟರ್ ಹೋದ ನಂತರ ದೋಣಿ ಒಂದು ಬದಿಗೆ ವಾಲಿದೆ. ನಿಯಂತ್ರಣ ತಪ್ಪಿ ಬೋಟ್ ಪಲ್ಟಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈವರೆಗೆ 22 ಮೃತದೇಹಗಳು ಪತ್ತೆಯಾಗಿವೆ. 11 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ ನೌಕಾಪಡೆ ಮತ್ತು ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ನೇತೃತ್ವದಲ್ಲಿ ದರುಂತದಲ್ಲಿ ಮೃತಪಟ್ಟವರ ಮೃತ ದೇಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಶೋಧ ಕಾರ್ಯದಲ್ಲಿ ರಾಜ್ಯ ಸರ್ಕಾರ ನೌಕಾಪಡೆಯ ನೆರವು ಕೋರಿದೆ. ನೌಕಾಪಡೆಯ ತಂಡವು ಹೆಲಿಕಾಪ್ಟರ್‌ನಲ್ಲಿ ಘಟನಾ ಸ್ಥಳದ ಆರಂಭಿಕ ಕಣ್ಗಾವಲು ನಡೆಸಿತು. ನೀರು ತೆರವು ಆರಂಭಿಸಿದ್ದು ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
7 ಮಕ್ಕಳು ದುರ್ಮರಣ: ಸತ್ತವರಲ್ಲಿ ಏಳು ಮಕ್ಕಳು ಸೇರಿದ್ದಾರೆ. ಒಂದೇ ಕುಟುಂಬದ ಹನ್ನೊಂದು ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ ಮೂವರು ಮಕ್ಕಳಿದ್ದಾರೆ. ಶಾಲೆಗಳಿಗೆ ಬೇಸಿಗೆ ರಜೆಯ ಖುಷಿ ಅನುಭವಿಸಲು ಹೋಗಿದ್ದ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅವಘಡಕ್ಕೇನು ಕಾರಣ?: ದೋಣಿ ಮುಳುಗಡೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ನಿಯಮ ಪಾಲಿಸದೇ ಇದ್ದುದರಿಂದಲೇ ಅನಾಹುತ ನಡೆದಿದೆ ಎಂದು ಶಾಸಕ ಪಿ.ಕೆ.ಕುಂಞಲಿಕುಟ್ಟಿ ಆರೋಪಿಸಿದ್ದಾರೆ. ಅಪಘಾತಕ್ಕೀಡಾದ ಹೌಸ್‌ಬೋಟ್‌ಗೆ ಯಾವುದೇ ಸುರಕ್ಷತಾ ಪ್ರಮಾಣಪತ್ರ ಇರಲಿಲ್ಲ. ಇದಕ್ಕೂ ಮೇಲಾಗಿ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ಹತ್ತಿಸಲಾಗಿತ್ತು ಎಂದು ಶಾಸಕರು ಹೇಳಿದ್ದಾರೆ. ಸಂಜೆ 6 ಗಂಟೆಯ ನಂತರ ಹೌಸ್‌ಬೋಟ್‌ಗಳಿಗೆ ಸವಾರಿ ಮಾಡಲು ಅವಕಾಶವಿಲ್ಲ ಎಂದು ಹೇಳಲಾಗಿದೆ.
ಬೋಟ್ ಸೇವೆ ಬಗ್ಗೆ ಮೊದಲಿನಿಂದಲೂ ದೂರು: ಪ್ರವಾಸಿಗರಿಗಾಗಿ ತಾನೂರು ತೂವಲ್ತೀರ್ನಲ್ಲಿ ನಾಲ್ಕು ಬೋಟ್ಗಳು ಕಾರ್ಯನಿರ್ವಹಿಸುತ್ತಿವೆ. ಸುರಕ್ಷತಾ ಸೌಲಭ್ಯಗಳಿಲ್ಲದೆ ಬೋಟ್ ಸೇವೆ ನಡೆಸುತ್ತಿರುವ ಬಗ್ಗೆ ಈ ಹಿಂದೆಯೇ ದೂರುಗಳು ಬಂದಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ದೋಣಿಯ ಮಾಲೀಕರಿಗೂ ತಿಳಿಸಲಾಗಿದೆ. ಅಪಘಾತ ಸಂಭವಿಸಿದಾಗ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವರು ತಿಳಿಸಿದ್ದಾರೆ. ಅಪಘಾತಕ್ಕೀಡಾದ ದೋಣಿಯ ಸಿಬ್ಬಂದಿ ಸೇರಿದಂತೆ 22 ಜನರಿಗೆ ಕುಳಿತು ಪ್ರಯಾಣಿಸಲು ಅವಕಾಶ ನೀಡಲಾಯಿತು. ಆದರೆ ನಿನ್ನೆ 40ಕ್ಕೂ ಹೆಚ್ಚು ಮಂದಿ ಬೋಟ್ನಲ್ಲಿ ಪ್ರಯಾಣಿಸಿರುವುದು ಬೆಳಕಿಗೆ ಬಂದಿದೆ.
ಬೋಟ್ ಮಾಲೀಕ ಪರಾರಿ: ಬೋಟ್ ಮಾಲೀಕ ತಾನೂರಿನ ನಾಸರ್ ತಲೆಮರೆಸಿಕೊಂಡಿದ್ದಾನೆ. ನಾಸರ್ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ. ದೋಣಿ ಪ್ರಯಾಣಕ್ಕೆ ಯೋಗ್ಯವಾಗಿಲ್ಲ ಎಂದು ವರದಿಯಾಗಿದೆ. ಮೀನುಗಾರಿಕಾ ದೋಣಿಯನ್ನು ಪರಿವರ್ತಿಸಿ ಪ್ರವಾಸೋದ್ಯಮಕ್ಕೆ ಬಳಸಲಾಗಿದೆ. ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೇರಿಕೆ: ಪ್ರಧಾನಿ ಮೋದಿ ಸಂತಾಪ