ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಏ.06 ರಂದು ನಡೆಯಲಿದ್ದು, ಈಗಾಗಲೇ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಇವರಿಗೆ ಇನ್ನಷ್ಟು ಉತ್ತೇಜನ ನೀಡುವ ಸಲುವಾಗಿ ಮೂರು ಪಕ್ಷಗಳ ಘಟಾನುಘಟಿ ನಾಯಕರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.
ಈ ಬಾರಿ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಅಸ್ಸಾಂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಪಕ್ಷಗಳು ಸಾಕಷ್ಟು ಕಸರತ್ತು ನಡೆಸಿವೆ. ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಕೇರಳಕ್ಕೆ ಸ್ಟಾರ್ ನಾಯಕರ ದಂಡೇ ಆಗಮಿಸಲಿದ್ದು, ಅದಕ್ಕಾಗಿ ಎಲ್ಲಾ ರೀತಿ ತಯಾರಿ ಕೂಡ ಆರಂಭವಾಗಿದೆ.
ನಾಳೆಯಿಂದ ರಾಗಾ ಪ್ರಚಾರ ಆರಂಭ:
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಾಳೆಯಿಂದ ಕೇರಳದ ಎರ್ನಾಕುಲಂ, ಕೊಟ್ಟಾಯಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದು, ಅದಕ್ಕಾಗಿ ಕೇರಳ ತಲುಪಿದ್ದಾರೆ. ಇವರ ಜೊತೆಗೆ ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಕೂಡ ಭಾಗಿಯಾಗಲಿದ್ದು, ನಾಳೆಯಿಂದ ಮಾರ್ಚ್ 28 ರವರೆಗೆ ಎಲ್ಡಿಎಫ್ ಅಭಿಯಾನ ನಡೆಸಲಿದೆ.
ರಾಹುಲ್ಗೆ ಪ್ರಿಯಾಂಕ ಸಾಥ್:
ಇನ್ನು ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪರ ಪ್ರಚಾರಕ್ಕಾಗಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಮೂರು ಹಂತಗಳಲ್ಲಿ ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸಿ ಪ್ರಿಯಾಂಕಾ ಮಾತನಾಡಲಿದ್ದಾರೆ.
ಕಾಂಗ್ರೆಸ್ ನಡೆಸುವ ಪ್ರಚಾರ ಕಾರ್ಯದಲ್ಲಿ ಈ ಬಾರಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಆರ್‌ಜೆಪಿ ಮುಖಂಡ ಮತ್ತು ಬಿಹಾರ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್, ಕಾಂಗ್ರೆಸ್ ಮುಖಂಡರಾದ ಗುಲಾಮ್ ನಬಿ ಆಜಾದ್, ಸಚಿನ್ ಪೈಲಟ್, ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಅಶೋಕ ಗೆಹ್ಲೋಟ್, ಅಮರಿಂದರ್ ಸಿಂಗ್ ಮೊದಲಾವರು ಭಾಗವಹಿಸಲಿದ್ದಾರೆ.
ಮಾರ್ಚ್ 30ಕ್ಕೆ ಕೇರಳಕ್ಕೆ ನಮೋ :
ಕೇರಳದ ವಿವಿಧ ಭಾಗಗಳಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 30 ಮತ್ತು ಏಪ್ರಿಲ್ 1 ರಂದು ಕೇರಳಕ್ಕೆ ಭೇಟಿ ನೀಡಲಿದ್ದು, ಗೃಹ ಸಚಿವ ಅಮಿತ್ ಶಾ ಮಾರ್ಚ್ 24, 25 ಮತ್ತು ಏಪ್ರಿಲ್ 3 ರಂದು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾ. 27 ಮತ್ತು ಏ.1 ರಂದು ನಡೆಯುವ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಇವರ ಜೊತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವೆ ಸ್ಮೃತಿ ಇರಾನಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾನ್ ಮತ್ತು ಬಿಪ್ಲಾವ್ ಕುಮಾರ್ ದೇವ್ ಅವರು ಕೇರಳದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ.
ಓದಿ: ವಿಗ್, ಸಾಕ್ಸ್, ಒಳ ಉಡುಪಿನಲ್ಲಿಟ್ಟು ಚಿನ್ನ, ಕರೆನ್ಸಿ ಸಾಗಾಟ; 11 ಜನರ ಬಂಧನ
ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜ ಅವರು ಮಾರ್ಚ್ 25 ರಿಂದ ಮಾರ್ಚ್ 28 ರವರೆಗೆ ಕೇರಳದಲ್ಲಿ ಎಡಪಂಥೀಯರ ಪರ ಪ್ರಚಾರ ನಡೆಸಲಿದ್ದಾರೆ. ಸಿಪಿಐನ ಸ್ಟಾರ್ ಪ್ರಚಾರಕರಾದ ಕನ್ಹಯ್ಯ ಕುಮಾರ್ ಮಾರ್ಚ್ 31 ಮತ್ತು ಏಪ್ರಿಲ್ 1 ರಂದು ಕೇರಳಕ್ಕೆ ಆಗಮಿಸಲಿದ್ದಾರೆ.