ಹೈದರಾಬಾದ್(ತೆಲಂಗಾಣ): ರಾಜ್ಯದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತೇವೆ ಮತ್ತು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಅತಿಯಾದ ವಿಶ್ವಾಸದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷದ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರು ಈ ಹಿಂದೆ ಸರ್ಕಾರದ ಹಣದಲ್ಲಿ 22 ಲ್ಯಾಂಡ್ ಕ್ರೂಸರ್ ಕಾರುಗಳನ್ನು ಖರೀದಿಸಿ ಇಟ್ಟಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬುಧವಾರ ಬಹಿರಂಗಪಡಿಸಿದ್ದಾರೆ.
ಗುರುವಾರ ಲೋಕಾರ್ಪಣೆಗೊಳ್ಳಲಿರುವ ಸಾರ್ವಜನಿಕ ಆಡಳಿತ ಕಾರ್ಯಕ್ರಮವಾದ 'ಪ್ರಜಾ ಪಾಲನ' ಕುರಿತು ಹೈದರಾಬಾದ್ ಸಚಿವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಅಧಿಕಾರಾವಧಿಯಲ್ಲಿ ಕೆಸಿಆರ್ ಸಾರ್ವಜನಿಕರ ಹಣವನ್ನು ದೊಡ್ಡ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದರು.
''ಕೆಸಿಆರ್ ಮೂರನೇ ಬಾರಿಗೆ ಸಿಎಂ ಆಗುತ್ತೇನೆ ಎಂದು ಭಾವಿಸಿ, ತಮ್ಮ ಅಧಿಕಾರವನ್ನು ಪ್ರದರ್ಶಿಸಲು 22 ಲ್ಯಾಂಡ್ ಕ್ರೂಸರ್ ಕಾರುಗಳನ್ನು ಮುಂಗಡವಾಗಿಯೇ ಖರೀದಿಸಿದ್ದಾರೆ. ಈ ಕಾರುಗಳನ್ನು ವಿಜಯವಾಡದಲ್ಲಿ ಬಚ್ಚಿಟ್ಟಿದ್ದಾರೆ. ಈ ವಿಷಯವನ್ನು ಕಿರಿಯ ಅಧಿಕಾರಿಯೊಬ್ಬರು ನನಗೆ ತಿಳಿಸಿದರು'' ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ: ತೆಲಂಗಾಣದಲ್ಲಿ ಮಹಿಳೆಯರ ಉಚಿತ ಬಸ್ ಪಯಣ ಆರಂಭ; ₹10 ಲಕ್ಷ ಆರೋಗ್ಯ ವಿಮೆ ಜಾರಿ
''ನಾನು ಅಧಿಕಾರ ವಹಿಸಿಕೊಂಡ ನಂತರ ಹೊಸ ವಾಹನಗಳನ್ನು ಖರೀದಿಸಿಲ್ಲ. ದುಂದು ವೆಚ್ಚ ಮಾಡಲ್ಲ. ಹಳೆ ವಾಹನಗಳನ್ನೇ ರಿಪೇರಿ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆದರೆ, ನಿಮಗೆ ತಿಳಿಯಬೇಕಾದ ವಿಷಯವೇನೆಂದರೆ, ಮಾಜಿ ಸಿಎಂ ಹೊಸ ಲ್ಯಾಂಡ್ ಕ್ರೂಸರ್ ಕಾರುಗಳನ್ನು ಖರೀದಿಸಿ ಬಚ್ಚಿಟ್ಟಿದ್ದಾರೆ. ಈ ವಿಷಯ ನನಗೆ ಸಿಎಂ ಆದ 10 ದಿನಗಳವರೆಗೂ ಗೊತ್ತಿರಲಿಲ್ಲ. ಆದರೆ, ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಈ ಹಿಂದಿನ ಸರ್ಕಾರದ ಅವಧಿಯಲ್ಲೇ ಈ ಹೊಸ ಕಾರುಗಳ ಖರೀದಿ ಮಾಡಿಡಲಾಗಿದೆ. ಮತ್ತೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇವುಗಳನ್ನು ತರಬೇಕೆಂದಿದ್ದರು'' ಎಂದು ಸಿಎಂ ವಿವರಿಸಿದರು.
''ಇಂತಹ ಆಸ್ತಿಗಳನ್ನೇ ಕೆಸಿಆರ್ ತಮ್ಮ ಆಡಳಿತದಲ್ಲಿ ಮಾಡಿದ್ದಾರೆ. ಈ ಕಾರುಗಳು ಸರ್ಕಾರದ ಸ್ವತ್ತು. ಪ್ರತಿ ಲ್ಯಾಂಡ್ ಕ್ರೂಸರ್ ಕಾರಿನ ಬೆಲೆ ಅಂದಾಜು 3 ಕೋಟಿ ರೂ. ಅವುಗಳಿಗೆ ಬುಲೆಟ್ ಪ್ರೂಫ್ ವ್ಯವಸ್ಥೆ ಮಾಡಿಸಿದರೆ, ವೆಚ್ಚ ಇನ್ನೂ ಅಧಿಕವಾಗುತ್ತದೆ. ಕೆಸಿಆರ್ ಸಾರ್ವಜನಿಕರ ಹಣವನ್ನು ಹೀಗೆಲ್ಲಾ ಪೋಲು ಮಾಡಿದ್ದಾರೆ'' ಎಂದು ಟೀಕಾಪ್ರಹಾರ ನಡೆಸಿದರು.
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಬಳಿಕ ನಡೆದ ಎರಡು ವಿಧಾನಸಭೆ ಚುನಾವಣೆಗಳಲ್ಲಿ ಕೆಸಿಆರ್ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಆದರೆ, ನವೆಂಬರ್ನಲ್ಲಿ ನಡೆದ ರಾಜ್ಯದ 3ನೇ ವಿಧಾನಸಭೆ ಚುನಾವಣೆಯಲ್ಲಿ ಇವರ ನೇತೃತ್ವದ ಬಿಆರ್ಎಸ್ ಸೋಲು ಕಂಡಿದೆ. 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 64 ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದರೊಂದಿಗೆ ಮೂರನೇ ಬಾರಿಗೆ ಸಿಎಂ ಆಗುವ ಕೆಸಿಆರ್ ಕನಸು ಭಗ್ನವಾಗಿದೆ.
ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೊಳಗಾಗಿರುವ ಕೆಸಿಆರ್ ಆರೋಗ್ಯ ವಿಚಾರಿಸಿದ ಸಿಎಂ ರೇವಂತ್ ರೆಡ್ಡಿ