ಶ್ರೀನಗರ(ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಗಣಿತ ಶಿಕ್ಷಕ ಮತ್ತು ನವೋದ್ಯಮಿಯೊಬ್ಬರು ಸೌರಶಕ್ತಿ ಸಹಾಯದಿಂದ ಚಲಿಸುವ ಕಾರು ತಯಾರಿಸಿದ್ದಾರೆ. ಉತ್ತಮ ಸೌಲಭ್ಯಗಳುಳ್ಳ ಈ ಕಾರು ಕಡಿಮೆ ಖರ್ಚಿನಲ್ಲಿ ತಯಾರಾಗಿದೆ ಎನ್ನುವುದು ವಿಶೇಷತೆ. ಉತ್ತರ ಕಾಶ್ಮೀರದ ತಂಗ್ಮಾರ್ಗ್‌ನ ಬಿಲಾಲ್ ಅಹ್ಮದ್ ಸತತ 13 ವರ್ಷಗಳಿಂದ ಈ ಯೋಜನೆಯಲ್ಲಿ ಕಾರ್ಯನಿರತರಾಗಿದ್ದು ಇದೀಗ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
"ವಿಶೇಷ ಚೇತನರಿಗಾಗಿ ಕಾರೊಂದನ್ನು ತಯಾರಿಸಬೇಕೆಂದು ಬಯಸಿದ್ದೆ. ಆದ್ರೆ ಆರ್ಥಿಕ ಸಮಸ್ಯೆ ಇದಕ್ಕೆ ಅಡ್ಡಿಯಾಯಿತು. ಆ ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ ಸೋಲಾರ್ ಕಾರಿನ ವಿಷಯ ನನಗೆ ಕುತೂಹಲ ಉಂಟುಮಾಡಿತು. ಸೌರ ಶಕ್ತಿಯು ಉಚಿತ ಶಕ್ತಿ ಮತ್ತು ಪೆಟ್ರೋಲ್, ಡೀಸೆಲ್ ಬೆಲೆಯೀಗ ಭಾರಿ ಏರಿಕೆಯಾಗಿದೆ. ಹಾಗಾಗಿ ಸೋಲಾರ್ ಕಾರು ಸೂಕ್ತ ಎನಿಸಿತು.
1950ರಿಂದ ತಯಾರಾಗುತ್ತಿರುವ ವಿವಿಧ ಐಷಾರಾಮಿ ಕಾರುಗಳನ್ನು ವೀಕ್ಷಿಸಿ ಅವುಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೆ. ಜನರಿಗೆ ಐಷಾರಾಮಿ ಅನುಭವವನ್ನು ನೀಡಲು ನಾನು ಏನನ್ನಾದರೂ ಮಾಡಬೇಕೆಂದು ಯೋಚಿಸಿದೆ ಮತ್ತು ಕಾರಿನ ತಯಾರಿಕೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ವಿವಿಧ ವಿಡಿಯೋಗಳನ್ನು ನೋಡುವ ಮೂಲಕ ಅದನ್ನು ಮಾರ್ಪಡಿಸಿ ಮತ್ತು ಅದರಲ್ಲಿರುವ ವೈಶಿಷ್ಟ್ಯಗಳನ್ನು ಸೇರಿಸಲು ಪ್ರಾರಂಭಿಸಿದೆ. ಈಗ ಈ ಸೋಲಾರ್ ಕಾರನ್ನು ಕಂಡು ಹಿಡಿದಿದ್ದೇನೆ" ಎಂದು ಬಿಲಾಲ್ ಅಹ್ಮದ್ ವಿವರಿಸಿದರು.
ಇದನ್ನೂ ಓದಿ: ಕಡಿಮೆ ವೆಚ್ಚದಲ್ಲಿ ತೈಲವಿಲ್ಲದೆ ಓಡುವ ಪುಟ್ಟ ಕಾರು: ಹೇಗಿದೆ ಗೊತ್ತಾ ಈ ಹೈಬ್ರಿಡ್ ವಾಹನ?
ಕಾಶ್ಮೀರದಲ್ಲಿ ಹೆಚ್ಚು ಬಿಸಿಲಿರುವುದಿಲ್ಲ. ಹಾಗಾಗಿ ನಾನು ಕಡಿಮೆ ಸೂರ್ಯನ ಬೆಳಕಿನ ದಿನಗಳಲ್ಲೂ ಹೆಚ್ಚಿನ ದಕ್ಷತೆ ನೀಡಬಲ್ಲ ಸೌರ ಫಲಕಗಳನ್ನು ಬಳಸಿದ್ದೇನೆ. ಕೆಲವೊಮ್ಮೆ ಕೆಲ ಜಾಗಗಳಲ್ಲಿ ಕಾರ್ ಪಾರ್ಕಿಂಗ್ ಮಾಡಿದಾಗ ಸೂರ್ಯನ ಬೆಳಕು ಕಾರಿಗೆ ತಾಗುವುದಿಲ್ಲ. ಹಾಗಾಗಿ ಫೆರಾರಿಯಲ್ಲಿರುವಂತೆ ಮೇಲಕ್ಕೆ ತೆರೆದುಕೊಳ್ಳುವ ಗುಲ್ವಿಂಗ್ ಡೋರ್ ತಯಾರಿಸಿದೆ. ಇದು ಸೂರ್ಯನ ಕಿರಣಗಳನ್ನು ಎಳೆದುಕೊಳ್ಳಲಿದೆ.
ಆಸನಗಳ ವ್ಯವಸ್ಥೆ, ತಂತ್ರಜ್ಞಾನ ಸೇರಿದಂತೆ ಕಾರಿನ ವ್ಯವಸ್ಥೆ ಆಧುನಿಕವಾಗಿದೆ. ಸದ್ಯ ಈ ಕಾರು 15 ಲಕ್ಷ ರೂ.ನಲ್ಲಿ ತಯಾರಾಗಿದೆ ಎಂದು ಮಾಹಿತಿ ನೀಡಿದರು.