ಕಾಸರಗೋಡು (ಕೇರಳ): ಇಲ್ಲಿನ ಮೊಗ್ರಾಲ್ ಪುತ್ತೂರಿನಲ್ಲಿ ಎಮ್ಮೆ ದಾಳಿಗೆ ಯುವಕ ಸಾವನ್ನಪ್ಪಿದ್ದಾನೆ. ಕರ್ನಾಟಕದ ಚಿತ್ರದುರ್ಗ ನಿವಾಸಿ ಸಾದಿಕ್ (22) ಮೃತಪಟ್ಟವನೆಂದು ಗುರುತಿಸಲಾಗಿದೆ. ಹಗ್ಗ ಹರಿದು ಓಡಿಹೋದ ಎಮ್ಮೆಯನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಘಟನೆ ನಡೆದಿದೆ.
ವಿವರ: ಗುರುವಾರ ಸಂಜೆ 4 ಗಂಟೆಯ ಸುಮಾರಿಗೆ ಘಟನೆ ನಡೆಯಿತು. ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತಂದ ಎಮ್ಮೆಯನ್ನು ಇಳಿಸುತ್ತಿದ್ದಾಗ ಅದು ಹಗ್ಗ ಹರಿದು ಓಡಿ ಹೋಗಿದೆ. ಎಮ್ಮೆಯನ್ನು ಹಿಡಿಯಲು ಮುಂದಾದಾಗ ಸಾದಿಕ್ಗೆ ಕೊಂಬಿನಿಂದ ತಿವಿದಿದೆ. ಹೊಟ್ಟೆಗೆ ಕೊಂಬು ಚುಚ್ಚಿದ್ದು ಸಾದಿಕ್ನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆತ ಅಸುನೀಗಿದ್ದಾನೆ.
ಎಮ್ಮೆ ಮೊಗ್ರಾಲ್ ಪುತ್ತೂರಿನಿಂದ ನೆರೆಯ ಮೊಗ್ರಾಲ್‌ಗೆ ಓಡಿತ್ತು. ಎದುರಿಗೆ ಬಂದವರಲ್ಲಿ ಆತಂಕ ಉಂಟುಮಾಡಿತ್ತು. ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳಿಗೆ ಗುದ್ದಲು ಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಬೈಕ್ ಸವಾರನೊಬ್ಬ ರಸ್ತೆಗೆ ಬಿದ್ದಿದ್ದಾನೆ. ಎರಡು ಅಂಗಡಿಗಳಿಗೆ ಹಾನಿಯಾಗಿದೆ. ಬೇಕರಿಗೆ ನುಗ್ಗಿದ ಎಮ್ಮೆ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿದೆ. ಗಾಯಾಳುಗಳು ಚಿಕಿತ್ಸೆ ಪಡೆದು ಮರಳಿದ್ದಾರೆ.
ಇದಕ್ಕೂ ಮುನ್ನ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಎಮ್ಮೆ ಸೆರೆ ಹಿಡಿಯುವ ಕಾರ್ಯ ಕೈಗೊಂಡರು. ಕತ್ತಲಾಗುವವರೆಗೂ ಎಮ್ಮೆ ಕೈಗೆ ಸಿಕ್ಕಿರಲಿಲ್ಲ. ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು. ಕೊನೆಗೆ ಹಗ್ಗದ ಮೂಲಕ ಎಮ್ಮೆಯನ್ನು ಸೆರೆಹಿಡಿದು ಮಾಲೀಕರಿಗೆ ಒಪ್ಪಿಸಲಾಗಿದೆ.
ಮಗುವಿನ ಮೇಲೆ ಗೂಳಿ ದಾಳಿ: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಧನಿಪುರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ನಾಲ್ಕು ವರ್ಷದ ಮಗುವಿನ ಮೇಲೆ ಗೂಳಿ ದಾಳಿ ಮಾಡಿದೆ. ಇದರಿಂದ ಮಗುವಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೂಳಿ ಹಿಡಿದ ಪಾಲಿಕೆ: ಘಟನೆ ಬಳಿಕ ಸ್ಥಳೀಯರು ನಗರಸಭೆಗೆ ದೂರು ನೀಡಿದ್ದರು. ಇದಾದ ನಂತರ ಆ ಪ್ರದೇಶದಲ್ಲಿ ಬಿಡಾಡಿ ಹೋರಿಗಳನ್ನು ಹಿಡಿಯುವ ಅಭಿಯಾನ ನಡೆಸಲಾಯಿತು. ಮಹಾನಗರ ಪಾಲಿಕೆಯ ತಂಡದ ಸದಸ್ಯರು ಸ್ಥಳಕ್ಕೆ ಆಗಮಿಸಿ ದಾಳಿ ಮಾಡುತ್ತಿದ್ದ ಗೂಳಿ ಸೆರೆ ಹಿಡಿದರು. ಈ ಘಟನೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಹೊರ ಹೋಗದಂತೆ ಜನರು ಎಚ್ಚರಿಕೆ ವಹಿಸಿದ್ದರು.
ಇದನ್ನೂ ಓದಿ: ಅಲಿಗಢದಲ್ಲಿ 4 ವರ್ಷದ ಮಗುವಿನ ಮೇಲೆ ಗೂಳಿ ದಾಳಿ: ವಿಡಿಯೋ ವೈರಲ್