ಬೆಂಗಳೂರು: ಸ್ಪರ್ಧಾ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪದಡಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನಿಖೆ ನಡೆಸಲು ಮುಂದಾಗಿರುವ ಕ್ರಮ ಪ್ರಶ್ನಿಸಿ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿವೆ.
ಕರ್ನಾಟಕ ಹೈಕೋರ್ಟ್ ವಜಾ ಮಾಡಿ ಆದೇಶ ಹೊರಹಾಕಿದೆ. ತಮ್ಮ ವಿರುದ್ಧ ಸಿಸಿಐ ನಡೆಸಲು ಉದ್ದೇಶಿಸಿರುವ ತನಿಖೆ ಪ್ರಶ್ನಿಸಿ ಇ-ಕಾಮರ್ಸ್ ದೈತ್ಯ ಸಂಸ್ಥೆಗಳಾದ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಪಿ. ಎಸ್ ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಕಳೆದ ಜೂನ್ 11ರಂದು ಅರ್ಜಿದಾರ ಸಂಸ್ಥೆಗಳ ಮನವಿ ವಜಾ ಮಾಡಿ ಆದೇಶಿಸಿತ್ತು.
ಏಕ ಸದಸ್ಯ ಪೀಠದ ಈ ಆದೇಶ ಪ್ರಶ್ನಿಸಿ ಸಂಸ್ಥೆಗಳು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾ, ನಟರಾಜ್ ರಂಗಸ್ವಾಮಿ ಅವರಿದ್ದ ವಿಭಾಗೀಯ ಪೀಠ ಏಕ ಸದಸ್ಯ ಪೀಠದ ಆದೇಶವನ್ನೇ ಎತ್ತಿಹಿಡಿದಿದೆ. ಈ ಹಂತದಲ್ಲಿ ತನಿಖೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಹಾಗೆಯೇ ಸಂಸ್ಥೆಗಳು ತನಿಖೆಗೆ ಭಯಪಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿಯನ್ನು ವಜಾ ಮಾಡಿದೆ.
ಇದನ್ನೂ ಓದಿ: ಟ್ವಿಟರ್ ಎಂಡಿ ಮನೀಶ್ಗೆ ಕರ್ನಾಟಕ ಹೈಕೋರ್ಟ್ನಿಂದ ರಿಲೀಫ್
ಪ್ರಕರಣದ ಹಿನ್ನೆಲೆ:
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಇ-ಕಾಮರ್ಸ್ ಸಂಸ್ಥೆಗಳು ಉಳಿದ ವ್ಯಾಪಾರಿಗಳಿಗೆ ಕುತ್ತು ತರುವ ರೀತಿಯಲ್ಲಿ ಬೆಲೆ ನಿಗದಿ ಮಾಡುತ್ತಿವೆ. ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿರುವ ಜತೆಗೆ, ಆದ್ಯತೆಯ ಮಾರಾಟಗಾರರ ಜತೆಗೆ ವಿಶೇಷ ಪಾಲುದಾರಿಕೆಯಲ್ಲಿ ತೊಡಗಿವೆ ಎಂದು ಅಖಿಲ ಭಾರತ ವರ್ತಕರ ಮಹಾ ಒಕ್ಕೂಟ (ಸಿಎಐಟಿ) ಹಾಗೂ ದೆಹಲಿ ವ್ಯಾಪಾರ್ ಮಹಾಸಂಘ್ (ಡಿವಿಎಂ) ಆರೋಪಿಸಿದ್ದವು. ಅಲ್ಲದೇ, ಈ ಕುರಿತು ಸಿಸಿಐಗೆ ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಸಿಸಿಐ ಅಮೆಜಾನ್ ಹಾಗೂ ಫ್ಲಿಫ್ ಕಾರ್ಟ್ ವಿರುದ್ಧ ತನಿಖೆಗೆ ಮುಂದಾಗಿದ್ದರಿಂದ, ತನಿಖೆ ರದ್ದು ಕೋರಿ ಇ-ಕಾಮರ್ಸ್ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.