ಜೈಪುರ(ರಾಜಸ್ಥಾನ): ಮುಸ್ಲಿಂ ಪ್ರಾಬಲ್ಯವಿರುವ ರಾಜಸ್ಥಾನದ ಕರೌಲಿ ಜಿಲ್ಲೆಯ ಪ್ರದೇಶವೊಂದರಲ್ಲಿ ಮೋಟಾರ್‌ಸೈಕಲ್ ರ‍್ಯಾಲಿ ಹಾದು ಹೋಗುವ ವೇಳೆ ಕಲ್ಲು ತೂರಾಟ ನಡೆದಿದ್ದು, ಇದಾದ ನಂತರ ಕೋಮು ಗಲಭೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕರೌಲಿ ಜಿಲ್ಲಾಡಳಿತ ಏಪ್ರಿಲ್ 7ರವರೆಗೆ ಕರ್ಫ್ಯೂ ವಿಸ್ತರಿಸಿದ್ದು, ಮುಂದಿನ ಆದೇಶದವರೆಗೆ ಇಂಟರ್ನೆಟ್ ಸೌಲಭ್ಯವನ್ನೂ ಸ್ಥಗಿತಗೊಳಿಸಗೊಳಿಸಲು ಸೂಚನೆ ನೀಡಲಾಗಿದೆ. ಕರೌಲಿಯಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಗಂಭೀರ ಆರೋಪದ ಮೇಲೆ ಕೌನ್ಸಿಲರ್ ಮತ್ಲೂಮ್ ಅಹ್ಮದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂಸಾಚಾರದ ಪ್ರಮುಖ ಸಂಚುಕೋರ ಎಂದು ಗುರುತಿಸಲಾಗಿರುವ ಅಹ್ಮದ್ ತಲೆಮರೆಸಿಕೊಂಡಿದ್ದಾನೆ. ರ‍್ಯಾಲಿಯಲ್ಲಿ ಕಲ್ಲು ತೂರಾಟ, ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ರ‍್ಯಾಲಿಯಲ್ಲಿ ಭಾಗವಹಿಸುವವರ ಮೇಲೆ ದಾಳಿ ಮಾಡಲು ಜನರನ್ನು ಒಟ್ಟುಗೂಡಿಸಿದ ಗಂಭೀರ ಆರೋಪ ಅಹ್ಮದ್ ಮೇಲಿದೆ. ಮೂಲಗಳ ಪ್ರಕಾರ, ರಾಜಸ್ಥಾನ ಪೊಲೀಸರು ಎಫ್‌ಐಆರ್‌ನಲ್ಲಿ ಅಹ್ಮದ್ ಹೆಸರು ಉಲ್ಲೇಖಿಸಿದ್ದಾರೆ ಮತ್ತು ಆರೋಪಿಯ ವಿರುದ್ಧ ಐಪಿಸಿಯ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಬಂಧಿಸಲಾದ ಇತರ ಆರೋಪಿಗಳನ್ನು ಸೋಮವಾರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕರೌಲಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಶ್ರಮಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿ!: ನೋಡಿ