ಕಾನ್ಪುರ: ತನ್ನ ಚಿಕ್ಕಪ್ಪನನ್ನು ಜೈಲಿಗೆ ಕಳುಹಿಸಿದ ಸೇಡಿನಿಂದಾಗಿ ಯುವಕನೊಬ್ಬ, ಬಾಲಕನ ಮೇಲೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಬಾಲಕನ ಕಿರುಚಾಟ ಕೇಳಿದ ಜನರು ಧಾವಿಸಿ ಬಂದು ಆತನನ್ನು ರಕ್ಷಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾನ್ಪುರದ ಹ್ಯಾರಿಸ್‌ಗಂಜ್ ರೈಲ್ವೆ ಕಾಲೋನಿ ನಿವಾಸಿಯಾದ ಫಿರೋಜ್ ಆಲಂ ಬೆಂಕಿ ಹಚ್ಚಿ ಪರಾರಿಯಾದ ಯುವಕ. ಕೆಲ ಸಮಯದ ಹಿಂದೆ ಆರೋಪಿಯ ಚಿಕ್ಕಪ್ಪನಾದ ಫಾರೂಕ್ ವಿರುದ್ಧ ಸಂತ್ರಸ್ತ ಬಾಲಕನ ಕುಟುಂಬದವರು ಕಳ್ಳತನದ ಆರೋಪ ಹೊರಿಸಿ ಜೈಲಿಗಟ್ಟಿದ್ದರು.
ಇದರಿಂದ ಕೋಪಗೊಂಡಿದ್ದ ಫಿರೋಜ್ ಕುಟುಂಬಸ್ಥರು ಗಾಯಗೊಂಡ ಬಾಲಕನ ಕುಟುಂಬದ ವಿರುದ್ಧ ಸೇಡು ಬೆಳೆಸಿಕೊಂಡಿದ್ದರು. ಇಂದು ತನ್ನೊಂದಿಗೆ ಆಟವಾಡುವ ನೆಪದಲ್ಲಿ ಬಾಲಕನನ್ನು ಮನೆಯಿಂದ ಕರೆದೊಯ್ದ ಫಿರೋಜ್ ನಂತರ ಬೆಂಕಿ ಹಚ್ಚಿದ್ದಾನೆ. ಕಿರುಚಾಡುತ್ತಿದ್ದ ಬಾಲಕನನ್ನು ಕಂಡ ಜನರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತೀವ್ರ ಸುಟ್ಟ ಗಾಯಗಳಾಗಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಪರಾರಿಯಾದ ಯುವಕನ ವಿರುದ್ಧ ಕೇಸ್ ದಾಖಲಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ: ಆರೋಪಿಗಳ ಮನೆ ಕೆಡವಿದ 'ಬುಲ್ಡೋಜರ್'