ಕಾನ್ಪುರ (ಉತ್ತರಪ್ರದೇಶ) : ಹುಟ್ಟು ಉಚಿತ ಸಾವು ಖಚಿತ ಅನ್ನೋ ಮಾತು ಸುಳ್ಳಲ್ಲ. ಆದರೆ, ಸಾವು ಕುಂತಲ್ಲಿ, ನಿಂತಲ್ಲಿ ಬರುತ್ತಿರೋದು ಆಘಾತಕಾರಿ ವಿಚಾರ. ಇಂಥದ್ದೇ ಘಟನೆ ಉತ್ತರಪ್ರದೇಶದ ಕಾನ್ಪುರ ಐಐಟಿಯಲ್ಲಿ ಶುಕ್ರವಾರ ನಡೆದಿದೆ. ಪ್ರಾಧ್ಯಾಪಕರೊಬ್ಬರು ಕಾರ್ಯಕ್ರಮದಲ್ಲಿ ಮಾತನಾಡುತ್ತಲೇ ಉಸಿರು ಚೆಲ್ಲಿದ್ದಾರೆ. ಇನ್ನೂ ವಿಚಿತ್ರ ಅಂದರೆ ಅವರು ಆರೋಗ್ಯದ ಬಗ್ಗೆ ಬೋಧಿಸುತ್ತಿದ್ದಾಗ ಪ್ರಾಣ ಕಳೆದುಕೊಂಡಿದ್ದಾರೆ.
ಸಮೀರ್ ಖಾಂಡೇಕರ್ (55) ಸಾವನ್ನಪ್ಪಿದ ಪ್ರಾಧ್ಯಾಪಕ. ಕಾನ್ಪುರದ ಐಐಟಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ವೇದಿಕೆಯ ಮೇಲೆ ಆರೋಗ್ಯ, ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ಬೆವೆತು ಹಠಾತ್ತಾಗಿ ಕುಸಿದು ಬಿದ್ದರು. ಅಲ್ಲಿದ್ದವರು ಬಂದು ವಿಚಾರಿಸಿ, ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಪ್ರಾಧ್ಯಾಪಕರು ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದರು.
ಹೃದ್ರೋಗದಿಂದ ಬಳಲುತ್ತಿದ್ದ ಪ್ರಾಧ್ಯಾಪಕ: ಪ್ರಾಧ್ಯಾಪಕ ಸಮೀರ್ ಖಾಂಡೇಕರ್ ಅವರು ಹೃದ್ರೋಗದಿಂದ ಬಳಲುತ್ತಿದ್ದರು. 2019 ರಿಂದ ಅವರು ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಹೀಗಾಗಿ ಅವರು ಅಚಾನಕ್ಕಾಗಿ ಹಾರ್ಟ್ ಅಟ್ಯಾಕ್ಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸಮೀರ್ ಆರೋಗ್ಯವಾಗಿದ್ದರು. ಅವರ ಹಠಾತ್ ಸಾವಿನ ಸುದ್ದಿ ನಮ್ಮೆಲ್ಲರನ್ನು ಬೆಚ್ಚಿಬೀಳಿಸಿದೆ ಎಂದು ಐಐಟಿಯ ಆಡಳಿತ ಅಧಿಕಾರಿಗಳು ತಿಳಿಸಿದರು.
ಪ್ರೊ.ಸಮೀರ್ ಖಾಂಡೇಕರ್ ವಿದ್ಯಾರ್ಥಿ ವ್ಯವಹಾರಗಳ ಡೀನ್ ಆಗಿ ಕೆಲಸ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಕಾರ್ಯದರ್ಶಿ ಹಾಗೂ ಮಾಜಿ ನಿರ್ದೇಶಕರಾದ ಪ್ರೊ.ಅಭಯ್ ಕರಂಡಿಕರ್ ಸೇರಿದಂತೆ ಐಐಟಿಯ ಹಲವು ಹಿರಿಯ ಪ್ರಾಧ್ಯಾಪಕರು ಸಮೀರ್ ನಿಧನಕ್ಕೆ ಸಂತಾಪ ಸೂಚಿಸಿದರು.
ಖ್ಯಾತ ಪ್ರಾಧ್ಯಾಪಕರು: ಪ್ರೊಫೆಸರ್ ಸಮೀರ್ ಖಾಂಡೇಕರ್ ಐಐಟಿ ಕಾನ್ಪುರದ ಪ್ರಸಿದ್ಧ ಬೋಧಕರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕರಲ್ಲದೇ, ವಿದ್ಯಾರ್ಥಿ ವ್ಯವಹಾರಗಳ ಡೀನ್ ಹುದ್ದೆಯನ್ನೂ ಅಲಂಕರಿಸಿದ್ದರು. ವಿದ್ಯಾರ್ಥಿಗಳ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಐಐಟಿ ಕಾನ್ಪುರದ ಜೊತೆಗೆ ಮಾಜಿ ಪ್ರೊಫೆಸರ್ ಎಚ್‌ಸಿ ವರ್ಮಾ ಅವರು ನಡೆಸಿಕೊಡುವ ಶಿಕ್ಷಾ ಸೋಪಾನ ಆಶ್ರಮದಲ್ಲೂ ಅವರು ಬೋಧನೆ ಮಾಡುತ್ತಿದ್ದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಕ್ಕೂ ಪಾಠ ಮಾಡುತ್ತಿದ್ದರು.
ಸಮೀರ್ ಖಂಡೇಕರ್ ಅವರು 10 ನವೆಂಬರ್ 1971 ರಂದು ಜಬಲ್ಪುರದಲ್ಲಿ ಜನಿಸಿದರು. 2000ನೇ ಇಸವಿಯಲ್ಲಿ ಕಾನ್ಪುರದ ಐಐಟಿಯಲ್ಲಿ ವ್ಯಾಸಂ ಮಾಡಿ ಬಿ.ಟೆಕ್ ಪದವಿ ಪಡೆದರು. 2004 ರಲ್ಲಿ ಜರ್ಮನಿಗೆ ತೆರಳಿದ ಅವರು ಪಿಎಚ್‌ಡಿ ಪೂರ್ಣಗೊಳಿಸಿದರು. ವಾಪಸ್ ಬಂದ ಬಳಿಕ ಐಐಟಿ ಕಾನ್ಪುರಕ್ಕೆ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡರು. 2009 ರಲ್ಲಿ ಅವರು ಸಹ ಪ್ರಾಧ್ಯಾಪಕರಾದರು. 2014 ರಲ್ಲಿ ಅವರು ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. 2020 ರಲ್ಲಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದರು. 2023 ರಲ್ಲಿ ಅವರು ವಿದ್ಯಾರ್ಥಿ ವ್ಯವಹಾರಗಳ ಡೀನ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಸ್ಥಿತಿ ಗಂಭೀರ