ಚೆನ್ನೈ: ಕಮಲ್ ಹಾಸನ್ ಅವರು ಚುನಾವಣೆಗೆ ಮುಂಚಿತವಾಗಿ ಭ್ರಷ್ಟ ಮುಕ್ತ, ಪ್ರಾಮಾಣಿಕತೆ, ಜನರ ಕಲ್ಯಾಣ ಸರ್ಕಾರಕ್ಕೆ ಭರವಸೆ ನೀಡುವ ಮೂಲಕ ದ್ರಾವಿಡ ಪಕ್ಷಗಳಿಗೆ ಸವಾಲು ಹಾಕಲು ಸಜ್ಜಾಗಿದ್ದಾರೆ.
ಚುನಾವಣೆಗೆ ಕೇವಲ ಎರಡು ವಾರಗಳು ಬಾಕಿ ಇದ್ದು, ಎಂಎನ್‌ಎಂ ಮುಖ್ಯಸ್ಥ ಕಮಲ್ ಹಾಸನ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಎಂಎನ್‌ಎಂ ಅಧಿಕಾರಕ್ಕೆ ಬಂದರೆ ಮುಂದಿನ 10 ವರ್ಷಗಳಲ್ಲಿ ರಾಜ್ಯ ಜಿಡಿಪಿಯನ್ನು ಒಂದು ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ನಮಗೆ ಮತ ಹಾಕಿದರೆ ತಲಾ ಆದಾಯವನ್ನು 7-10% ಹೆಚ್ಚಿಸಲಾಗುವುದು ಎಂದೂ ತಿಳಿಸಿದ್ದಾರೆ.
1 ರಿಂದ 2 ಕೋಟಿ ಜನರಿಗೆ ಮೌಲ್ಯವರ್ಧಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ಎಲ್ಲರಿಗೂ ಶುದ್ಧ ನೀರು ಒದಗಿಸಲಾಗುವುದು ಎಂದು ಹೇಳಿರುವ ಅವರು, ನದಿಗಳ ಪರಸ್ಪರ ಸಂಪರ್ಕ, ಜಲಮೂಲಗಳ ಸಂರಕ್ಷಣೆ ಎಂಎನ್‌ಎಂನ ಪ್ರಮುಖ ಯೋಜನೆಗಳು ಎಂದು ಪ್ರಾಣಾಳಿಕೆಯಲ್ಲಿ ತಿಳಿಸಿದ್ದಾರೆ.
ಮೀನುಗಾರರ ಸಮುದಾಯದ ಜೀವನೋಪಾಯ ಸುಧಾರಿಸಲಾಗುವುದು. ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲಾಗುವುದು. ಹಾಗೆ ನೀಟ್ ಬದಲಿಗೆ ಸೀಟ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕಮಲ್ ಭರವಸೆ ನೀಡಿದ್ದಾರೆ.