ಚೆನ್ನೈ: ನಟ ಕಮ್ ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಲ್ ನೀಧಿ ಮಾಯಂ (ಎಂಎನ್‌ಎಂ) ಪಕ್ಷದ ಉಪಾಧ್ಯಕ್ಷ ಆರ್.ಮಹೇಂದ್ರನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆ ಅವರನ್ನು ಕಮಲ್ ಹಾಸನ್ 'ವಿಶ್ವಾಸದ್ರೋಹಿ' ಎಂದು ಕರೆದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹಾಸನ್ ಅವರ ಮಕ್ಕಲ್ ನೀಧಿ ಮಾಯಮ್ (ಎಂಎನ್‌ಎಂ) ಪಕ್ಷ ಸೋತ ನಂತರ ಆರ್.ಮಹೇಂದ್ರನ್ ರಾಜೀನಾಮೆ ನೀಡಿದ್ರು.
ಇನ್ನು ಮಹೇಂದ್ರನ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ಎಂಎನ್‌ಎಂನಲ್ಲಿದ್ದ "ಒಂದು ಕಳೆ" ಈ ಇಲ್ಲದಂತಾಯ್ತು ಎಂದು ಕಮಲ್ ಅವರು ಸಂತೋಷ ವ್ಯಕ್ತಪಡಿಸಿದರು. ಅಸಮರ್ಥ ಮತ್ತು ಅಪ್ರಾಮಾಣಿಕ ವ್ಯಕ್ತಿಗಳು ಹೊರಹೋಗಲು ಪಕ್ಷದ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ವೈಫಲ್ಯಗಳನ್ನು ನೋಡಿ ಓಡಿಹೋಗುವ ಹೇಡಿಗಳನ್ನು ನಾವು ನಿರ್ಲಕ್ಷಿಸುತ್ತೇವೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಪಕ್ಷದ ಹಿರಿಯರ ಜೊತೆ ಚುನಾವಣಾ ಮೈತ್ರಿಗಳ ಬಗ್ಗೆ ಸಮಾಲೋಚಿಸಲಾಗಿಲ್ಲ ಮತ್ತು 100 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ನೀಡುವ ನಿರ್ಧಾರವು ಆಘಾತಕಾರಿ, ಜನರ ಮನಸ್ಸಿನಲ್ಲಿ ಪಕ್ಷದ ಚಿತ್ರಣವನ್ನು ಹಾಳು ಮಾಡುತ್ತದೆ ಎಂದು ಮಹೇಂದ್ರನ್ ತಮ್ಮ ರಾಜೀನಾಮೆ ಪತ್ರದಲ್ಲಿ ಕಮಲ್ ಹಾಸನ್‌ಗೆ ತಿಳಿಸಿದ್ದಾರೆ.
ಪಕ್ಷದಲ್ಲಿ ಯಾರಿಗಾದರೂ ಪ್ರಾಮಾಣಿಕತೆ ಬಗ್ಗೆ ಕಲಿಸಬಹುದೆಂದು ಕಮಲ್ ಹಾಸನ್‌ಗೆ ಸ್ಪಷ್ಟವಾಗಿ ಹೇಳಿದ ಮಹೇಂದ್ರನ್, ತಲೆತಗ್ಗಿಸಲ್ಲ, ತಲೆ ಎತ್ತಿಯೇ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಹೇಂದ್ರನ್ ರಾಜೀನಾಮೆ ನಂತರ ಪಕ್ಷದ ನಾಲ್ಕು ಪ್ರಧಾನ ಕಾರ್ಯದರ್ಶಿಗಳಾದ ಎ ಜಿ ಮೌರ್ಯ, ಉಮಾದೇವಿ, ಸಿ ಕೆ ಕುಮಾರವೇಲ್ ಮತ್ತು ಎಂ ಮುರುಗಾನಂದಂ ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.