ನವದೆಹಲಿ: ಭಾರತದ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ವಹಿಸುವ ಸಂಸ್ಥೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್ಪಿಸಿಐಎಲ್) ಗುಜರಾತಿನ ಕಕ್ರಾಪರ್ ಅಣು ವಿದ್ಯುತ್ ಸ್ಥಾವರ ಯೋಜನೆ (ಕೆಎಪಿಪಿ) ಯಲ್ಲಿನ ತನ್ನ ಎರಡನೇ 700 ಮೆಗಾವ್ಯಾಟ್ ಘಟಕವು ಭಾನುವಾರ ಮುಂಜಾನೆ 1.17ಕ್ಕೆ ವಿದ್ಯುತ್ ಉತ್ಪಾದನೆಯ ನಿರ್ಣಾಯಕ ಹಂತವನ್ನು ತಲುಪಿದೆ ಎಂದು ತಿಳಿಸಿದೆ. ಇದು ಕಕ್ರಾಪರ್‌ನಲ್ಲಿ ಎನ್ಪಿಸಿಐಎಲ್ನ ನಾಲ್ಕನೇ ಪರಮಾಣು ವಿದ್ಯುತ್ ಘಟಕವಾಗಿದೆ.
ಎನ್ಪಿಸಿಐಎಲ್ ಕಕ್ರಾಪರ್‌ನಲ್ಲಿ ಎರಡು 220 ಮೆಗಾವ್ಯಾಟ್ ಮತ್ತು ಒಂದು 700 ಮೆಗಾವ್ಯಾಟ್ ಪರಮಾಣು ವಿದ್ಯುತ್ ಸ್ಥಾವರಗಳನ್ನು ಈಗಾಗಲೇ ಕಾರ್ಯಾಚರಣೆಗೊಳಿಸಿದೆ. ಮೊದಲ 700 ಮೆಗಾವ್ಯಾಟ್ ಸಾಮರ್ಥ್ಯದ ಘಟಕವು ಆಗಸ್ಟ್ 30, 2023 ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಕಕ್ರಾಪರ್ನಲ್ಲಿರುವ ಎರಡು ಘಟಕಗಳು ಎನ್ಪಿಸಿಐಎಲ್ ದೇಶೀಯವಾಗಿ ವಿನ್ಯಾಸಗೊಳಿಸಿ ಸ್ಥಾಪಿಸಲಾದ 16 ಹೆವಿ ವಾಟರ್ ರಿಯಾಕ್ಟರ್ಗಳ (pressurized heavy water reactors -PHWR) ಭಾಗವಾಗಿವೆ.
"ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯ (ಎಇಆರ್ಬಿ) ಯ ಎಲ್ಲಾ ನಿಬಂಧನೆಗಳನ್ನು ಪಾಲಿಸಿದ ನಂತರ ವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಸ್ಥಾವರ ವ್ಯವಸ್ಥೆಗಳ ಸುರಕ್ಷತೆಯ ಸಂಪೂರ್ಣ ಪರಿಶೀಲನೆಯ ನಂತರ ಎಇಆರ್ಬಿ ಇದರ ಕಾರ್ಯಾರಂಭಕ್ಕೆ ಅನುಮತಿ ನೀಡಿದೆ." ಎಂದು ಎನ್ಪಿಸಿಐಎಲ್ ಹೇಳಿದೆ.
ಕೆಎಪಿಪಿ -3 ರ ಸುಗಮ ಕಾರ್ಯಾಚರಣೆಯೊಂದಿಗೆ ಪರಮಾಣು ಶಕ್ತಿಯ ಎಲ್ಲಾ ಮಾದರಿಗಳಲ್ಲಿ ಅಂದರೆ ವಿನ್ಯಾಸ, ನಿರ್ಮಾಣ, ಕಾರ್ಯಾರಂಭ ಮತ್ತು ಕಾರ್ಯಾಚರಣೆಯಲ್ಲಿ ಎನ್ಪಿಸಿಐಎಲ್ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಮೊದಲ ನಿರ್ಣಾಯಕ ಹಂತದ ನಂತರ ಕೆಎಪಿಪಿ -4 ರಲ್ಲಿ ಹಲವಾರು ಪ್ರಯೋಗ ಮತ್ತು ಪರೀಕ್ಷೆಗಳನ್ನು ನಡೆಸಲಾಗುವುದು. ನಂತರ ಎಇಆರ್ಬಿಯ ನಿಬಂಧನೆಗಳಿಗೆ ಅನುಗುಣವಾಗಿ ವಿದ್ಯುತ್ ಮಟ್ಟವನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ. ಅಂತಿಮವಾಗಿ ಘಟಕ ತನ್ನ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆ ಆರಂಭಿಸುತ್ತದೆ.
ಎನ್ಪಿಸಿಐಎಲ್ ಪ್ರಸ್ತುತ ಒಟ್ಟು 7,480 ಮೆಗಾವ್ಯಾಟ್ ಸಾಮರ್ಥ್ಯದ 23 ರಿಯಾಕ್ಟರ್ಗಳನ್ನು ನಿರ್ವಹಿಸುತ್ತಿದೆ ಮತ್ತು 7,500 ಮೆಗಾವ್ಯಾಟ್ ಸಾಮರ್ಥ್ಯದ ಒಂಬತ್ತು ಘಟಕಗಳು (ಕೆಎಪಿಪಿ -4 ಸೇರಿದಂತೆ) ನಿರ್ಮಾಣ ಹಂತದಲ್ಲಿದೆ. ಇದಲ್ಲದೆ, ಒಟ್ಟು 7,000 ಮೆಗಾವ್ಯಾಟ್ ಸಾಮರ್ಥ್ಯದ ಇನ್ನೂ 10 ರಿಯಾಕ್ಟರ್ ಗಳು ಯೋಜನಾ ಪೂರ್ವ ಹಂತದಲ್ಲಿವೆ. ಇವು 2031-32ರ ವೇಳೆಗೆ ಹಂತ ಹಂತವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎನ್ಪಿಸಿಐಎಲ್ ತಿಳಿಸಿದೆ.
ಇದನ್ನೂ ಓದಿ: GenAIನಿಂದ 2030ರ ವೇಳೆಗೆ ಭಾರತದ ಜಿಡಿಪಿಗೆ 1.5 ಟ್ರಿಲಿಯನ್ ಡಾಲರ್ ಆದಾಯ: ವರದಿ