ಮುಂಬೈ: ತೆಲಂಗಾಣ ಮುಖ್ಯಮಂತ್ರಿ ಮತ್ತು ಭಾರತ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷವನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ. ತೆಲಂಗಾಣಕ್ಕೆ ಹೊಂದಿಕೊಂಡಿರುವ ನಾಂದೇಡ್ನಿಂದ ತಮ್ಮ ಪಕ್ಷವನ್ನು ಆರಂಭಿಸಿ ಮರಾಠವಾಡದ ಮೇಲೆ ಪ್ರಭಾವ ಬೀರಲು ತಂತ್ರ ಹೂಡಿದ್ದಾರೆ. ಮಹಾರಾಷ್ಟ್ರದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ವಿರೋಧ ಪಕ್ಷದ ವ್ಯಾಪ್ತಿಯನ್ನು ಪರಿಗಣಿಸಿ, ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಸಂಗಡಿಗರು ಮಹಾರಾಷ್ಟ್ರದಲ್ಲಿ ಬಿಆರ್ಎಸ್ ಪಕ್ಷವನ್ನು ಬೇರೂರಿಸಲು ಪ್ರಯತ್ನಿಸುತ್ತಿದ್ದಾರೆ.
ಬಿಆರ್ಎಸ್ ದೃಷ್ಟಿ ಮರಾಠವಾಡದ ಮೇಲೇಕೆ ಕೆಸಿಆರ್ ಕಣ್ಣು?: ಮುಂಬೈ, ಪುಣೆ, ನಾಸಿಕ್ ನಂತಹ ದೊಡ್ಡ ನಗರಗಳನ್ನು ಬಿಟ್ಟು ಬಿಆರ್ ಎಸ್ ಪಕ್ಷ ಮರಾಠವಾಡಕ್ಕೆ ಲಗ್ಗೆಯಿಡಲು ಯತ್ನಿಸುತ್ತಿದೆ. ಹಾಗಾದರೆ ಅವರು ಈ ಭಾಗವನ್ನು ಆರಿಸಿಕೊಳ್ಳಲು ಕಾರಣ ಏನಾಗಿರಬಹುದು ಎಂಬ ಬಗ್ಗೆ ಎಲ್ಲಾ ಕಡೆ ಚರ್ಚೆ ಆರಂಭವಾಗಿದೆ. ಆದರೆ, ಈ ಬಗ್ಗೆ ಬಿಆರ್ಎಸ್ ಪಕ್ಷದ ಶಾಸಕ ಜೀವನ್ ರೆಡ್ಡಿ ಕೆಲವು ಅಂಶಗಳನ್ನು ವಿವರಿಸಿದ್ದಾರೆ. ತೆಲಂಗಾಣಕ್ಕೆ ಹತ್ತಿರವಾಗಿ ಮರಾಠವಾಡದ ನಾಂದೇಡ್ ಜಿಲ್ಲೆ ಇದ್ದು, ಇಲ್ಲಿನ ಜನರು ತೆಲಂಗಾಣದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುತ್ತಿದ್ದಾರೆ. ಮತ್ತು ನಾಂದೇಡ್ ಪ್ರದೇಶದ ನಾಗರಿಕರು ರೈತರು ಮತ್ತು ಸಾಮಾನ್ಯ ಜನ ನಮ್ಮ ಕಾರ್ಯಗಳಿಗೆ ಸ್ಪಂದಿಸುತ್ತಿದ್ದಾರೆ.
ಹಾಗಾಗಿ ಮೊದಲಿಗೆ ನಾಂದೇಡ್ನಲ್ಲಿ ಸಾರ್ವಜನಿಕ ಸಭೆ ಕೂಡ ನಡೆಸಲಾಯಿತು. ಮರಾಠವಾಡದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಬಲ ಬರುವುದರಲ್ಲಿ ಸಂಶಯವಿಲ್ಲ. ಅಷ್ಟೇ ಅಲ್ಲ, ಮರಾಠವಾಡದಲ್ಲಿ ರೈತರು ಎದುರಿಸುತ್ತಿದ್ದ ಸಮಸ್ಯೆಗಳು ಒಂದು ಕಾಲದಲ್ಲಿ ತೆಲಂಗಾಣದ ರೈತರ ಸಮಸ್ಯೆಗಳಾಗಿದ್ದವು. ಹಾಗಾಗಿ ತೆಲಂಗಾಣದ ರೈತರಿಗೆ ಸಿಗುವ ಸೌಲಭ್ಯಗಳನ್ನು ನಾವೂ ಪಡೆಯಬಹುದು ಎಂಬ ಭಾವನೆ ರೈತರಲ್ಲಿರುವುದರಿಂದ ಬಿಆರ್ ಎಸ್ ಗೆ ಇಲ್ಲಿ ಉತ್ತಮ ಪ್ರತಿಕ್ರಿಯೆ ಸಿಗಬಹುದು.
ಅದಕ್ಕಾಗಿಯೇ ಬಿಆರ್ ಎಸ್ ತನ್ನ ಪಕ್ಷವನ್ನು ಮರಾಠವಾಡಕ್ಕೂ ವಿಸ್ತರಿಸಲು ಯೋಜನೆ ಆರಂಭಿಸಿದೆ ಎಂದು ಶಾಸಕ ಜೀವನ್ ರೆಡ್ಡಿ ಹೇಳಿದರು. ಇದಕ್ಕಾಗಿ ತೆಲಂಗಾಣದ ನಾಲ್ವರು ಶಾಸಕರಾದ ಜೀವನ್ ರೆಡ್ಡಿ, ಬಾಲ್ಕ ಸೂಮನ್, ಜೋಗು ರಾಮಣ್ಣ ಮತ್ತು ಹನುಮಂತ್ ಶಿಂಧೆ ಮರಾಠವಾಡದ ಮೇಲೆ ತಮ್ಮ ಕಣ್ಣು ಹಾಯಿಸಿದ್ದಾರೆ.
ನಾಂದೇಡ್ ಸೇರಿದಂತೆ ತೆಲಂಗಾಣ ಗಡಿಯಲ್ಲಿರುವ ಮಹಾರಾಷ್ಟ್ರದ ಹಲವು ಗ್ರಾಮಗಳು ತೆಲಂಗಾಣದ ಸೇವಾ ಸೌಲಭ್ಯಗಳಿಂದ ಆಕರ್ಷಿತವಾಗಿವೆ. ಹೀಗಾಗಿ ಇಲ್ಲಿನ ಕೆಲ ಗ್ರಾಮಗಳು ಕೂಡ ತೆಲಂಗಾಣ ರಾಜ್ಯಕ್ಕೆ ಸೇರ್ಪಡೆಗೊಳ್ಳಲು ಅವಕಾಶ ಕಲ್ಪಿಸಿ ಈ ಗ್ರಾಮಗಳಿಗೆ ಸಿಗುವ ಸೇವಾ ಸೌಲಭ್ಯಗಳು ಸಿಗುವಂತಾಗಬೇಕು ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಜಕೀಯವಾಗಿ ನೆಲೆಯೂರಲು ಇದೇ ಸರಿಯಾದ ಅವಕಾಶ ಮತ್ತು ಸಮಯ ಎನ್ನುತ್ತಾರೆ ಬಿಆರ್ ಎಸ್ ಪಕ್ಷದ ನಾಯಕರು. ಅದಕ್ಕಾಗಿಯೇ ಗಡಿ ಪ್ರದೇಶದಿಂದ ಪ್ರವೇಶಿಸಿ ತೆಲಂಗಾಣಕ್ಕೆ ಹತ್ತಿರವಿರುವ ಮರಾಠವಾಡದಲ್ಲಿ ಮೊದಲು ಬಿಆರ್ಎಸ್ ಪಕ್ಷವನ್ನು ವಿಸ್ತರಿಸುವ ಚಟುವಟಿಕೆ ಆರಂಭಿಸಿದೆ.
ಇದನ್ನೂ ಓದಿ: ಐಐಟಿ ಖರಗ್‌ಪುರ ವಿದ್ಯಾರ್ಥಿಯ ಸಾವು ಪ್ರಕರಣ: ಎರಡನೇ ಬಾರಿ ಶವಪರೀಕ್ಷೆ ನಡೆಸಲು ಕಲ್ಕತ್ತಾ ಹೈಕೋರ್ಟ್ ಆದೇಶ