ಜನ ಸಾಮಾನ್ಯರಿಗೆ ನಮ್ಮನ್ನು ತಲುಪಲು ಸಾಧ್ಯವಾಗದಿದ್ದಾಗ, ನಾವೇ ಅವರನ್ನು ತಲುಪಬೇಕು. ಈ ಚಿನ್ನದಂತಹ ನುಡಿಗಳನ್ನು ನುಡಿದದ್ದು ದೇಶದ ಸರ್ವೋಚ್ಚ ನ್ಯಾಯಾಲಯದ 48 ನ್ಯಾಯಮೂರ್ತಿ ಜಸ್ಟಿಸ್ ಎನ್.ವಿ ರಮಣ. ಒಂದು ತಿಂಗಳ ಹಿಂದೆ ಅವರು, ಸಮಾರಂಭವೊಂದರಲ್ಲಿ ಈ ಮಾತುಗಳನ್ನಾಡಿದ್ದರು. ನವದೆಹಲಿಯಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಜನಸಾಮಾನ್ಯರಿಗೆ ಉಚಿತ ಕಾನೂನು ನೆರವು ನೀಡುವ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದರು.
ಶನಿವಾರ ಭಾರತದ ಸರ್ವೋಚ್ಚ ನ್ಯಾಯಾಲಯದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಜಸ್ಟಿಸ್ ರಮಣ ಅವರು, ಈ ಪ್ರತಿಷ್ಠಿತ ಹುದ್ದೆಗೆ ಏರಿದ ಆಂಧ್ರಪ್ರದೇಶದ 2ನೇ ನ್ಯಾಯಮೂರ್ತಿ. ಈ ಹಿಂದೆ, ನ್ಯಾಯಮೂರ್ತಿ ಕೋಕಾ ಸುಬ್ಬರಾವ್ ಅವರು 5 ದಶಕಗಳ ಹಿಂದೆ ಈ ಹುದ್ದೆಯನ್ನು ಅಲಂಕರಿಸಿದ್ದರು.
2019ರಲ್ಲಿ ದೇಶದ ಸಂವಿಧಾನ ದಿನ ಆಚರಣೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ರಮಣ ಅವರು ನ್ಯಾಯ ವಿತರಣೆ ಸಂದರ್ಭದಲ್ಲಿ ಅನುಸರಿಸ ಬೇಕಾದ ಕ್ರಮಗಳ ಬಗ್ಗೆ ಹೇಳಿದ್ದರು.
ನ್ಯಾಯ ದಾನಕ್ಕೆ ಸಂಬಂಧಿಸಿ ನಾವು ಹೊಸ ಸಾಧನಗಳನ್ನು ವಿನ್ಯಾಸಗೊಳಿಸಬೇಕು. ಹೊಸ ವಿಧಾನಗಳನ್ನು ರೂಪಿಸಬೇಕು, ಹೊಸ ಕಾರ್ಯ ತಂತ್ರಗಳನ್ನು ಆವಿಷ್ಕರಿಸಬೇಕು. ಆ ಮೂಲಕ ಸೂಕ್ತ ನ್ಯಾಯವನ್ನು ನೀಡಬೇಕು.
ಈ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ನ್ಯಾಯಮೂರ್ತಿ ರಮಣ ಅವರು ತಮ್ಮ ಮುಂದಿನ 16 ತಿಂಗಳ ಸೇವಾವಧಿಯ ಸಂದರ್ಭದಲ್ಲಿ ಇದನ್ನು ಈಡೇರಿಸುತ್ತಾರೆ ಎಂಬ ಭರವಸೆ ಎಲ್ಲೆಡೆ ವ್ಯಕ್ತವಾಗಿದೆ.
ಸುಮಾರು 5 ವರ್ಷಗಳ ಹಿಂದೆ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಬಹಿರಂಗವಾಗಿ ದೇಶದ ನ್ಯಾಯಾಂಗ ವ್ಯವಸ್ಥೆ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಬಣ್ಣಿಸಿದ್ದರು. ವ್ಯವಸ್ಥೆ ಸುಧಾರಿಸುವ ಬದಲು, ಸಮಯ ಕಳೆದಂತೆ ಹದಗೆಡುತ್ತಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಡ್ಬೆ ಅವರ ಅಧಿಕಾರಾವಧಿಯನ್ನು ಸೇರ್ಪಡೆಯಾದ 5 ಖಾಲಿ ಹುದ್ದೆಗಳನ್ನು ಇನ್ನು ಭರ್ತಿ ಮಾಡಲಾಗಿಲ್ಲ.
ಈ ವರ್ಷ ಇನ್ನೂ 5 ಖಾಲಿ ಹುದ್ದೆಗಳು ಈ ಪಟ್ಟಿಗೆ ಸೇರ್ಪಡೆಯಾಗಲಿವೆ. ಈ ಹುದ್ದಗೆಳನ್ನು ಭರ್ತಿ ಮಾಡುವುದು ಹಾಗೂ ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆ ಮಾಡುವ ಸವಾಲು ನ್ಯಾಯಮೂರ್ತಿ ರಮಣ ಅವರಿಗಿದೆ. ಸರ್ವೋಚ್ಚ ನ್ಯಾಯಾಲಯದ ಕೊಲ್ಜಿಯಂನಲ್ಲಿ ಒಮ್ಮತವನ್ನು ಸಾಧಿಸುವ ಮೂಲಕ ಅವರು ಈ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.
ಈಗ ದೇಶಾದ್ಯಂತ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು 4.4 ಕೋಟಿ ಗಡಿ ದಾಟಿದೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಭಾರತದ ಸಂವಿಧಾನದ 224 ಎ ವಿಧಿ ಅಡಿಯಲ್ಲಿ ತಾತ್ಕಾಲಿಕ ನ್ಯಾಯಾಧೀಶರ ನೇಮಕಾತಿಗೆ ಹಸಿರು ನಿಶಾನೆ ತೋರಿಸಿದೆ.
ಈ ನೇಮಕಾತಿಗಳ ಜವಾಬ್ದಾರಿ ನ್ಯಾಯಮೂರ್ತಿ ರಮಣ ಅವರ ಹೆಗಲ ಮೇಲಿದೆ. ಇದರ ಜೊತೆಗೆ, ದೇಶದ ನ್ಯಾಯ ರಥವನ್ನು ಮುನ್ನಡೆಸುವ ಜವಾಬ್ದಾರಿ ಕೂಡ ಅವರ ಮೇಲಿದೆ. ಅದೇ ಸಮಯದಲ್ಲಿ ಮಾಸ್ಟರ್ ಆಫ್ ರೋಸ್ಟರ್ ಆಗಿ ಅವರು ವಿಜಯಶಾಲಿಯಾಗಬೇಕಿದೆ.
ದೇಶದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಈ ಸಂದರ್ಭದಲ್ಲಿ ಬಹು ಮುಖ್ಯ ವಿಚಾರವೊಂದನ್ನು ಪ್ರತಿಪಾದಿಸಿದ್ದಾರೆ. ನ್ಯಾಯಾಂಗದಲ್ಲಿ ದೀರ್ಘಕಾಲೀನ ಸಮಷ್ಟಿ ಸುಧಾರಣೆಗಳನ್ನು ಕೈಗೊಳ್ಳಲು ದೇಶದ ಮುಖ್ಯ ನ್ಯಾಯಮೂರ್ತಿಗಳಿಗೆ ಕನಿಷ್ಠ 3 ವರ್ಷಗಳ ಅಧಿಕಾರಾವಧಿ ಇರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ದೇಶದ ಸಂವಿಧಾನದ ಆಶಯದಂತೆ ಎಲ್ಲರಿಗು ನ್ಯಾಯ ದೊರಕುವಂತಾಗಲು ಭಾರತದ ಮುಖ್ಯ ನ್ಯಾಯಮೂರ್ತಿ ಅವರು ದೇಶದ ಶಾಸಕಾಂಗ ಮತ್ತು ಕಾರ್ಯಂಗದ ನೆರವಿನೊಂದಿಗೆ ಕ್ರಿಯಾತ್ಮಕ ಶೈಲಿಯಲ್ಲಿ ಕಾರ್ಯನಿರ್ವಹಿಸಬೇಕು. ಈ ಸಂದರ್ಭದಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಭಾರತ ರತ್ನ ಪ್ರಣಬ್ ಮುಖರ್ಜಿ ಇಲ್ಲಿ ನೆನಪಿಸಿಕೊಳ್ಳಬಹುದು.
ಪ್ರಣಬ್ ಮುಖರ್ಜಿ ಪ್ರಕಾರ ಭಾರತದ ಪ್ರಧಾನಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳು ನಿಯಮಿತವಾಗಿ ಭೇಟಿಯಾದರೆ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು.ದೇಶದ ನ್ಯಾಯಾಂಗವು ಮೂಲಸೌಕರ್ಯಗಳ ಅಭಿವೃದ್ಧಿಗೆ ಅನುದಾನದ ಕೊರತೆಯನ್ನು ಎದುರಿಸುತ್ತಿದೆ.
ಈ ಮೂಲ ಸೌಕರ್ಯಗಳ ಮೇಲಿನ ವೆಚ್ಚವನ್ನು ಯೋಜಿತೇತರ ಖರ್ಚು ಎಂದು ಪರಿಗಣಿಸಲಾಗುತ್ತಿದೆ. ಅದರ ಜೊತೆಗೆ ನ್ಯಾಯಮೂರ್ತಿ ರಮಣ ಅವರೇ ಇತ್ತೀಚೆಗೆ ಕಾನೂನು ಶಿಕ್ಷಣದ ಕಳಪೆ ಮಾನದಂಡಗಳ ಬಗ್ಗೆ ಗಮನಸೆಳೆದಿದ್ದಾರೆ. ಇದು ಆತಂಕದ ವಿಷಯ ಎಂದು ಅವರು ಬಣ್ಣಿಸಿದ್ದಾರೆ.
ನ್ಯಾಯಾಂಗ ಅಕಾಡೆಮಿಯ ಅಧ್ಯಕ್ಷರಾಗಿ, ನ್ಯಾಯಮೂರ್ತಿ ರಮಣ ಅವರು ನ್ಯಾಯಾಂಗ ಅಧಿಕಾರಿಗಳ ತರಭೇತಿಯ ಗುಣಮಟ್ಟ ಸುಧಾರಣೆಗೆ ಶ್ರಮಿಸಿದ್ದಾರೆ. ದೇಶದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ದೇಶದೆಲ್ಲೆಡೆ ವ್ಯಾಪಕವಾಗಿ ಲೋಕ ಅದಾಲತ್‌ಗಳನ್ನು ನಡೆಸುವ ಮೂಲಕ ದೇಶದಾದ್ಯಂತ ಶ್ಲಾಘನೆಗೆ ಪಾತ್ರರಾಗಿದ್ದರು.
ಇದೀಗ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಅವರ ನೇಮಕ ಭರವಸೆಯ ಹೊಂಗಿರಣ ಎಂದು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಬಣ್ಣಿಸಿದೆ. ದೇಶದ ಅರೋಗ್ಯ ವ್ಯವಸ್ಥೆ ಇಂದು ಕೋವಿಡ್ ಕಾರಣಕ್ಕಾಗಿ ಕುಸಿಯಲಾರಂಭಿಸಿದೆ.
ಇದರ ಜೊತೆಗೆ, ದೇಶದ ಇತರ ಸಂಸ್ಥೆಗಳು ಸಹ ರಾಜಕೀಯ ಪರಿಗಣನೆಗಳ ಸಂಕುಚಿತ ದಾರಿಯನು ಅನುಸರಿಸಲಾರಂಭಿಸಿವೆ. ಈ ಸಂಕೀರ್ಣ ಸಂದರ್ಭದಲ್ಲಿ ಜನರ ಹಕ್ಕುಗಳ ರಕ್ಷಣೆಗೆ ಸುಪ್ರೀಂಕೋರ್ಟ್ ಮಾತ್ರ ಉಳಿದಿದೆ ಎಂಬ ಭಾವನೆ ದಟ್ಟವಾಗುತ್ತಿದೆ. ಈ ಹಿನ್ನೆಲೆ ನ್ಯಾಯಮೂರ್ತಿ ರಮಣ ಅವರು ನ್ಯಾಯಾಂಗದ ಮೌಲ್ಯಗಳು ಮತ್ತು ಗೌರವ ಎತ್ತಿ ಹಿಡಿಯುವಲ್ಲಿ ಬಹುಮುಖ್ಯ ಪಾತ್ರ ವಹಿಸಲಿದ್ದಾರೆ.
ಈ ಹಿಂದೆ ದೇಶದ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಕೋಕಾ ಸುಬ್ಬಾ ರಾವ್ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತಮ್ಮದೇ ಆದ ಗೌರವಾನ್ವಿತ ಸ್ಥಾನ ಪಡೆದಿದ್ದರು. ಅವರ ಪ್ರಾಮಾಣಿಕತೆ ಮತ್ತು ನಿರ್ಭಯತೆಯ ತೀರ್ಪುಗಳು ನ್ಯಾಯ ವ್ಯವಸ್ಥೆಯ ನೈಸರ್ಗಿಕ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತಿದ್ದವು.
ಅವರ ಹಲವಾರು ಗಮನಾರ್ಹ ತೀರ್ಪುಗಳು ಇಂದಿಗೂ ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಹಸಿರಾಗಿವೆ. ನ್ಯಾಯಮೂರ್ತಿ ರಮಣ ಅವರ ಅವಧಿ ಕೂಡ ಇದೆ ತೆರನಾಗಿರಲಿದೆ ಎಂಬ ಭಾವನೆ ಗಟ್ಟಿಯಾಗಿದೆ.