ನವದೆಹಲಿ: ನ್ಯಾಯಾಂಗವು ಪ್ರಜಾಪ್ರಭುತ್ವದ ಕಾವಲುಗಾರ. ಹಾಡ ಹಗಲೇ ಕಾನೂನಿನ ನಿಯಮಗಳನ್ನು ಮುರಿಯುತ್ತಿರುವುದನ್ನು ಇತ್ತೀಚೆಗೆ ನಾವು ಗಮನಿಸುತ್ತಿದ್ದೇವೆ. ಆದರೆ ನ್ಯಾಯಲಯ ಕಣ್ಣು ಮುಚ್ಚಿಲ್ಲ ಎಂದು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ಖಾರವಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಭೂಮಿಯಲ್ಲಿರುವ ದತ್ತಿ ಆಸ್ಪತ್ರೆಯ ಗುತ್ತಿಗೆ ಪತ್ರವನ್ನು ರದ್ದುಗೊಳಿಸಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅದರ ಆದೇಶ ಎತ್ತಿಹಿಡಿದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ, ಈ ಮಹತ್ವದ ಅಭಿಪ್ರಾಯವನ್ನ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ.
ಖೋಸ್ಲಾ ಮೆಡಿಕಲ್ ಇನ್‌ಸ್ಟಿಟ್ಯೂಟ್, ಶಾಲಿಮಾರ್ ಬಾಗ್‌ನಲ್ಲಿ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯನ್ನು ಸ್ಥಾಪಿಸಿತ್ತು. ಸಾರ್ವಜನಿಕ ಭೂಮಿಯಲ್ಲಿ ಸ್ಥಾಪಿಸಿದ್ದರಿಂದ ಅದು ಗುತ್ತಿಗೆಗೆ ಒಳಪಟ್ಟಿತ್ತು. ಆದರೆ 1995 ರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವು, ಸಂಸ್ಥೆಯು ಆಸ್ತಿಯನ್ನು ಮೂರನೇ ವ್ಯಕ್ತಿಗಳಿಗೆ ವರ್ಗಾಯಿಸಿದೆ ಮತ್ತು ಅದರಲ್ಲಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗಿದೆ ಹಾಗೂ ಗುತ್ತಿಗೆ ಪತ್ರದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಗುತ್ತಿಗೆ ಪತ್ರವನ್ನು ರದ್ದುಗೊಳಿಸಿ ಆಸ್ತಿಯನ್ನು ಖಾಲಿ ಮಾಡುವಂತೆ ನಿರ್ದೇಶಿಸಿತ್ತು.
ಇದನ್ನು ವಿಚಾರಣಾ ನ್ಯಾಯಾಲಯ ಕೂಡ ಎತ್ತಿ ಹಿಡಿದಿತ್ತು. ಆದ್ದರಿಂದ ಖೋಸ್ಲಾ ಮೆಡಿಕಲ್ ಸಂಸ್ಥೆ ವಿಚಾರಣಾ ನ್ಯಾಯಾಲಯದ ತೀರ್ಪುನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನ ಮೆಟ್ಟಿಲೇರಿತ್ತು.
ಹಾಗಾಗಿ ಇದರ ಸಂಪೂರ್ಣ ವಿಚಾರಣೆ ನಡೆಸಿದ ಕೋರ್ಟ್ ದೆಹಲಿ ಅಭಿವೃದ್ಧಿ ಪ್ರಾಧಿಕಾರವು ನೀಡಿರುವ ಯಾವ ದೂರುಗಳಿಗೂ ಸರಿಯಾದ ದಾಖಲೆಗಳಿಲ್ಲ ಎಂದು ಅಧಿಕಾರಿಗಳ ನಿರ್ಧಾರದ ವಿರುದ್ಧ ಸಂಸ್ಥೆಯ ಮೇಲ್ಮನವಿಯನ್ನು ಹೈಕೋರ್ಟ್ ಅಂಗೀಕರಿಸಿತು.
ಯಾವುದೇ ಕನ್ವೇಯನ್ಸ್ ಡೀಡ್, ಟೈಟಲ್ ಡೀಡ್ ಅಥವಾ ಇನ್ನಾವುದೇ ದಾಖಲೆಗಳು ಇಲ್ಲದ ಕಾರಣ ಸಂಸ್ಥೆಯ ಶೀರ್ಷಿಕೆ ಮತ್ತು ಮಾಲೀಕತ್ವವನ್ನು ಮೂರನೇ ವ್ಯಕ್ತಿಗೆ ವರ್ಗಾಯಿಸಲಾಗಿದೆ ಎಂದು ಹೇಳಲು ನಿರ್ಣಾಯಕ ಸಾಕ್ಷ್ಯ ಅಥವಾ ದಾಖಲೆಗಳಿಲ್ಲದೆ ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಇದನ್ನೂ ಓದಿ:ಭಾರತದ ಸಂವಿಧಾನವು ಸ್ತ್ರೀವಾದಿ ದಾಖಲೆಯಾಗಿದೆ: ಸಿಜೆಐ ಡಿವೈ ಚಂದ್ರಚೂಡ್