ಭೋಪಾಲ್(ಮಧ್ಯಪ್ರದೇಶ): ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನ್ಯಾಯಾಧೀಶರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲಾ ಕೇಂದ್ರದ ಸಮೀಪ ನಡೆದಿದೆ. ಅಲ್ಲದೇ, ಈ ಘಟನೆಯಲ್ಲಿ ನ್ಯಾಯಾಧೀಶರ ಸಹೋದ್ಯೋಗಿ ಮತ್ತು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಿಷಿ ತಿವಾರಿ ಎಂಬುವವರೇ ಮೃತ ನ್ಯಾಯಾಧೀಶ ಎಂದು ಗುರುತಿಸಲಾಗಿದೆ.
ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಶಿಶ್ ಮಥೋರಿಯಾ ಮತ್ತು ಇವರ ಸೋದರ ಮಾವ ರಾಮ್ ದಿನಕರ್ ಎಂಬುವರು ಗಾಯಗೊಂಡಿದ್ದು, ಇವರನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ರಿಷಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್‌ಸಿ) ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಛತ್ತರ್‌ಪುರ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿ ಅವರನ್ನು ನಿಯೋಜಿಸಲಾಗಿತ್ತು. ಶನಿವಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಸಾಗರ್-ಕಾನ್ಪುರ್ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ಟ್ರಾಲಿಗೆ ಕಾರು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.
ರಾಮ್ ದಿನಕರ್ ಎಂಬಾತ ಕಾರು ಚಲಾಯಿಸುತ್ತಿದ್ದರು. ಆದರೆ, ವೇಗದಲ್ಲಿದ್ದ ಕಾರಣ ಕಾರಿನ ಮೇಲೆ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಾಕ್ಟರ್ ಟ್ರಾಲಿಗೆ ಗುದ್ದಿದ್ದಾರೆ. ಭಾನುವಾರ ರಿಷಿ ತಿವಾರಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಸಿಧಿ ಜಿಲ್ಲೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜ್ಯೋತಿಷಿಯ ಭವಿಷ್ಯ ನಂಬಿ ಮೇಕೆಯೊಂದಿಗೆ ವಿವಾಹವಾದ ಯುವಕ!