ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ರಾಷ್ಟ್ರ ರಾಜಧಾನಿಯ ಎನ್‌ಡಿಎಂಸಿ ಸಮಾವೇಶ ಕೇಂದ್ರದಲ್ಲಿಂದು ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ.
ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣಾ ಹಿನ್ನೆಲೆ, ಚುನಾವಣೆಗಳಲ್ಲಿ ಗೆಲ್ಲಲು ಕಾರ್ಯತಂತ್ರ ರಚನೆ ಬಗ್ಗೆ ಬೆಳಗ್ಗೆ 10 ರಿಂದ ಸಂಜೆವರೆಗೆ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳಲ್ಲದೆ, ರಾಜ್ಯ ಉಸ್ತುವಾರಿ, ಸಹ ಉಸ್ತುವಾರಿ ಮತ್ತು ರಾಜ್ಯದ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಸಭೆಯಲ್ಲಿ ಮಾತನಾಡಲಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸೋಂ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ಕುರಿತು ಜೆ.ಪಿ.ನಡ್ಡಾ, ಶನಿವಾರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದರು.
ರಾಷ್ಟ್ರ ರಾಜಧಾನಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅರುಣ್ ಸಿಂಗ್, ಭೂಪೇಂದರ್ ಯಾದವ್, ತರುಣ್ ಚುಗ್, ದಿಲೀಪ್ ಸೈಕಿಯಾ, ಸಿ.ಟಿ.ರವಿ, ದುಶ್ಯಂತ್ ಗೌತಮ್ ಮತ್ತು ದಗ್ಗುಬಾಟಿ ಪುರಂದರೇಶ್ವರಿ ಸೇರಿದಂತೆ ಬಿಜೆಪಿ ನಾಯಕರು ಭಾಗವಹಿಸಿದ್ದರು. ಪಕ್ಷದ ಸಾಂಸ್ಥಿಕ ಚಟುವಟಿಕೆಗಳು ಮತ್ತು ರೈತರ ಆಂದೋಲನ ಕುರಿತು ನಾಯಕರು ಚರ್ಚಿಸಿದ್ದರು.