ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ಪರೋಪಕಾರಿ ಬಳಕೆಗಾಗಿ ಸಂಗ್ರಹಿಸಿದ ಹಣವನ್ನು ದುರುಪಯೋಗ ಮಾಡಿಕೊಂಡ ಗಂಭೀರ ಆರೋಪದ ಮೇರೆಗೆ ಬಿಜೆಪಿಯ ಕಟು ಟೀಕಾಕಾರ್ತಿ, ಪತ್ರಕರ್ತೆ ರಾಣಾ ಆಯುಬ್ ಅವರಿಗೆ ಸೇರಿದ 1.77 ಕೋಟಿ ರೂ ಹಣವಿದ್ದ ಬ್ಯಾಂಕ್ ಖಾತೆಯನ್ನು ಜಾರಿ ನಿರ್ದೇಶನಾಲಯ ಲಾಕ್ ಮಾಡಿದೆ.
ರಾಣಾ ಆಯುಬ್ ಮತ್ತು ಆಕೆಯ ಕುಟುಂಬದ ಹೆಸರಿನಲ್ಲಿರುವ ನಿಶ್ಚಿತ ಠೇವಣಿ ಮತ್ತು ಬ್ಯಾಂಕ್ ಖಾತೆಗಳನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಪ್ರಕರಣದ ಬಗ್ಗೆ ರಾಣಾ ಆಯುಬ್ ಇದುವರೆಗೆ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: ಕಿಮೀಗಟ್ಟಲೆ ಟ್ರಾಫಿಕ್... ಮುಹೂರ್ತಕ್ಕೆ ಹೊತ್ತಾಯ್ತು... 2 ಕಿಮೀ ನಡೆದುಕೊಂಡೇ ಹೋದ ಮದುಮಗ!
ರಾಣಾ ಆಯುಬ್ ವಿರುದ್ಧದ ಹಣ ವರ್ಗಾವಣೆ ಪ್ರಕರಣವು ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿದೆ. ‘ಹಿಂದೂ ಐಟಿ ಸೆಲ್’ ಎಂಬ ಎನ್‌ಜಿಒ ಸ್ಥಾಪಕ ಮತ್ತು ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ವಿಕಾಸ್ ಸಾಂಕೃತ್ಯಾಯನ್ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ದಾಖಲೆಯ ಪ್ರಕಾರ, 2020 ಮತ್ತು 2021ರ ನಡುವೆ ಚಾರಿಟಬಲ್ ಉದ್ದೇಶಗಳಿಗಾಗಿ ಕೆಟ್ಟೋ ಎಂಬ ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ರಾಣಾ ಅವರು 2.69 ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿದ್ದಾರೆ. ಒಟ್ಟು 2,69,44,680 ಹಣವನ್ನು ಇವರು ಕೆಟ್ಟೋನಲ್ಲಿ ಪಡೆದಿದ್ದಾರೆ. ಈ ಹಣವನ್ನು ಅವರ ಸಹೋದರಿ ಮತ್ತು ತಂದೆಯ ಬ್ಯಾಂಕ್ ಖಾತೆಗಳ ಮೂಲಕ ಹಿಂಪಡೆಯಲಾಗಿದೆ ಎಂದು ಇಡಿ ತಿಳಿಸಿದೆ.
ಇದನ್ನೂ ಓದಿ: ಕ್ರೀಡಾ ಬದುಕಿಗೆ ನಿವೃತ್ತಿ ಘೋಷಿಸಿದ ಮಿಂಚಿನ ವೇಗದ ಓಟಗಾರ ಜಸ್ಟಿನ್ ಗ್ಯಾಟ್ಲಿನ್
ರಾಣಾ ಆಯುಬ್ ಸುಮಾರು 31 ಲಕ್ಷ ವೆಚ್ಚದ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದಾರೆ. ಕ್ಲೈಮ್ ಮಾಡಿದ ವೆಚ್ಚಗಳ ಪರಿಶೀಲನೆಯ ನಂತರ ವಾಸ್ತವಿಕ ವೆಚ್ಚಗಳು 17.66 ಲಕ್ಷಗಳಷ್ಟೇ ಎಂದು ಕಂಡುಬಂದಿದೆ.
ಪರಿಹಾರ ಕಾರ್ಯದ ವೆಚ್ಚವನ್ನು ಪಡೆಯಲು ಕೆಲವು ಘಟಕಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸಿದ್ಧಪಡಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ವಿಮಾನದಲ್ಲಿ ವೈಯಕ್ತಿಕ ಪ್ರಯಾಣಕ್ಕಾಗಿ ಮಾಡಿದ ವೆಚ್ಚವನ್ನೂ ಕೂಡಾ ಪರಿಹಾರ ಕಾರ್ಯದ ವೆಚ್ಚವೆಂದು ನಮೂದಿಸಲಾಗಿದೆ ಎಂದು ಇಡಿ ತಿಳಿಸಿದೆ.
ಸಂಪೂರ್ಣ ಪೂರ್ವಯೋಜಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ಚಾರಿಟಿಯ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗಿದೆ. ಹಣವನ್ನು ಸಂಗ್ರಹಿಸಿದ ಉದ್ದೇಶಕ್ಕಾಗಿ ಬಳಸಲಾಗಿಲ್ಲ ಎಂಬುದು ಪ್ರಾಥಮಿಕ ತನಿಖೆ ಮೂಲಕ ಸ್ಪಷ್ಟವಾಗಿದೆ.
ಆಯುಬ್ ಅವರು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಗ್ರಹಿಸಿದ ನಿಧಿಯಿಂದ 50 ಲಕ್ಷದ ಸ್ಥಿರ ಠೇವಣಿ ಹೊಂದಿದ್ದಾರೆ. ಆದ್ರೆ ಪರಿಹಾರ ಕಾರ್ಯಕ್ಕಾಗಿ ಅದನ್ನು ಬಳಸಲಿಲ್ಲ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ಹೊರ ಬರಲಿದೆ.